ಯುದ್ಧದಲ್ಲಿ ಇರಾನ್ ಗೆದ್ದಿದೆ: ಇಸ್ರೇಲ್ ನಡೆಸಿದ ಸಮೀಕ್ಷೆಯಲ್ಲಿ ಜನಾಭಿಪ್ರಾಯ ಬಹಿರಂಗ

Photo Credit : PTI
ಟೆಲ್ ಅವೀವ್, ಜೂ.21: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ನಿಲ್ಲಿಸುವ ಉದ್ದೇಶದ ಸಭೆ ಮುಂದುವರಿಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ನ ಬಹುಪಾಲು ಜನರು ಇರಾನ್ ಈ ಯುದ್ಧದಿಂದ ಮತ್ತು ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದದಿಂದ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿದೆ ಎಂದು ನಂಬಿದ್ದಾರೆ.
ರವಿವಾರ ಬಿಡುಗಡೆಯಾದ ಹೊಸ ಸಮೀಕ್ಷೆಯೊಂದು ಈ ವಿಷಯವನ್ನು ಬಹಿರಂಗಪಡಿಸಿದೆ. ಜೂನ್ 17 ಮತ್ತು 20ರ ನಡುವೆ ಜೆರುಸಲೆಮ್ ವಿಶ್ವವಿದ್ಯಾಲಯವು ‘ಅಗಮ್ ಇನ್ಸ್ಟಿಟ್ಯೂಟ್’ ಸಹಯೋಗದೊಂದಿಗೆ 3,644 ಜನರನ್ನು ಸಂದರ್ಶಿಸಿ ನಡೆಸಿದ ಈ ಸಮೀಕ್ಷೆಯಲ್ಲಿ, ಶೇಕಡಾ 92.1 ರಷ್ಟು ಇಸ್ರೇಲಿಗಳು ಇರಾನ್ ಈ ಸಂಘರ್ಷದಲ್ಲಿ ಗೆದ್ದಿದೆ ಅಥವಾ ಹೆಚ್ಚಿನ ಲಾಭವನ್ನು ಪಡೆದಿದೆ ಎಂದು ನಂಬಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಮುಖ ರಾಜಕೀಯ ಬೆಂಬಲಿಗರಾಗಿರುವ ಬಲಪಂಥೀಯ ಒಕ್ಕೂಟದ ಶೇಕಡಾ 93.1 ರಷ್ಟು ಮತದಾರರು ಕೂಡ ಇರಾನ್ ಗೆದ್ದಿದೆ ಎಂದೇ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 82.9 ರಷ್ಟು ಜನರು ಇಸ್ರೇಲ್ನ ದೀರ್ಘಾವಧಿಯ ಭದ್ರತೆ ದುರ್ಬಲಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವನ್ನು ಶೇಕಡಾ 63.2 ರಷ್ಟು ಜನರು ವಿರೋಧಿಸಿದ್ದು, ಶೇಕಡಾ 56.4 ರಷ್ಟು ಜನರು ಯುದ್ಧವನ್ನು ನೆತನ್ಯಾಹು ನಿಭಾಯಿಸಿದ ರೀತಿಯನ್ನು ‘ವಿಫಲ’ ಅಥವಾ ‘ಕಳಪೆ’ ಎಂದು ಟೀಕಿಸಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗಲು ನೆತನ್ಯಾಹು ಅವರಿಗೆ ಇದ್ದ ಬೆಂಬಲವು ಮಾರ್ಚ್ ಆರಂಭದಲ್ಲಿದ್ದ ಶೇಕಡಾ 40.5ರಿಂದ ಜೂನ್ ವೇಳೆಗೆ ಶೇಕಡಾ 29.4ಕ್ಕೆ ಕುಸಿದಿದೆ. ಹಿಜ್ಬುಲ್ಲಾ ವಿರುದ್ಧದ ಸೈನಿಕ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂಬ ಅವರ ಹೇಳಿಕೆಗಳನ್ನು ಸುಮಾರು 75% ಜನರು ನಂಬುತ್ತಿಲ್ಲ. ಅಷ್ಟೇ ಅಲ್ಲದೆ, ಅಮೆರಿಕದೊಂದಿಗೆ ಸಂಘರ್ಷದ ಅಪಾಯವಿದ್ದರೂ ಸಹ ಲೆಬನಾನ್ನಲ್ಲಿ ಮತ್ತೆ ಸೈನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಎಂಬ ಅಭಿಪ್ರಾಯವನ್ನು ಶೇಕಡಾ 48.2 ರಷ್ಟು ಜನರು ಬೆಂಬಲಿಸಿದ್ದಾರೆ.






