ನ್ಯೂಯಾರ್ಕ್ನ ಬ್ರೂಕ್ಲಿನ್ ಸೇತುವೆಗೆ ಢಿಕ್ಕಿ ಹೊಡೆದ ಮೆಕ್ಸಿಕನ್ ನೌಕಾಪಡೆಯ ಹಡಗು : ಇಬ್ಬರು ಮೃತ್ಯು, ಕನಿಷ್ಠ 19 ಮಂದಿಗೆ ಗಾಯ

Photo | AP
ನ್ಯೂಯಾರ್ಕ್: ಮೆಕ್ಸಿಕನ್ ನೌಕಾಪಡೆಯ ನೌಕಾಯಾನ ಹಡಗು ಬ್ರೂಕ್ಲಿನ್ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನೌಕಾಪಡೆಯ ಹಡಗು ಬ್ರೂಕ್ಲಿನ್ ಸೇತುವೆಗೆ ಢಿಕ್ಕಿ ಹೊಡೆದ ಬಗ್ಗೆ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ದೃಢಪಡಿಸಿದ್ದಾರೆ.
ಕೆಡೆಟ್ ತರಬೇತಿ ಹಡಗು ನ್ಯೂಯಾರ್ಕ್ ಬಂದರಿನಿಂದ ಹೊರಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಕುರಿತ ವೀಡಿಯೊಗಳಲ್ಲಿ ಹಡಗಿನ ಮೂರು ಮಾಸ್ಟ್ಗಳು ಸೇತುವೆಯ ಕೆಳಗಿನ ಡೆಕ್ಗೆ ಢಿಕ್ಕಿ ಹೊಡೆದಿರುವುದು ಕಂಡು ಬಂದಿದೆ.
ಕುವಾಹ್ಟೆಮೊಕ್ ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು. ಇದು 15 ದೇಶಗಳಲ್ಲಿ 22 ಬಂದರುಗಳಿಗೆ ಭೇಟಿ ನೀಡಬೇಕಿತ್ತು.
ಮೆಕ್ಸಿಕನ್ ನೌಕಾಪಡೆ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಬ್ರೂಕ್ಲಿನ್ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಅಕಾಡೆಮಿ ತರಬೇತಿ ಹಡಗು ಕುವಾಹ್ಟೆಮೊಕ್ ಹಾನಿಗೊಳಗಾಗಿದೆ. ಸ್ಥಳದಲ್ಲಿ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದೆ.





