ವಲಸಿಗರು ತಮ್ಮ ಹಕ್ಕನ್ನು ಅರಿತುಕೊಳ್ಳಬೇಕು: ನ್ಯೂಯಾರ್ಕ್ ಮೇಯರ್ ಮಮ್ದಾನಿ

Photo Credit : AP \ PTI
ನ್ಯೂಯಾರ್ಕ್, ಡಿ.8: ನ್ಯೂಯಾರ್ಕ್ನಲ್ಲಿರುವ ವಲಸೆ ನಿವಾಸಿಗಳು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಏಜೆಂಟರೊಂದಿಗೆ ಮಾತನಾಡದಿರಲು ಅಥವಾ ಅನುಸರಿಸದಿರುವ ಕಾನೂನು ಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯೂಯಾರ್ಕ್ ನಗರದ ಚುನಾಯಿತ ಮೇಯರ್ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
ಮ್ಯಾನ್ಹಟನ್ ನಲ್ಲಿ ಐಸಿಇ ದಾಳಿಯ ವೀಡಿಯೊವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತನ್ನ ಆಡಳಿತವು ನಗರದ ದೊಡ್ಡ ವಲಸಿಗ ಜನಸಂಖ್ಯೆಯನ್ನು ರಕ್ಷಿಸಲು ಕೆಲಸ ಮಾಡುತ್ತದೆ. ನಿಮ್ಮ ಹಕ್ಕುಗಳನ್ನು ನೀವು ತಿಳಿದಿದ್ದರೆ ಐಸಿಇ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅಮೆರಿಕದಲ್ಲಿನ ಜನರು ವಲಸೆ ಏಜೆಂಟರ ಪ್ರಶ್ನೆಗಳಿಗೆ ಉತ್ತರಿಸಲು ಕಾನೂನುಬದ್ಧವಾಗಿ ನಿರಾಕರಿಸಬಹುದು. ಖಾಸಗಿ ಪ್ರದೇಶಗಳಿಗೆ ಪ್ರವೇಶಿಸಲು ಐಸಿಇ ಅಧಿಕಾರಿಗಳ ಕೋರಿಕೆಯನ್ನು ನಿರಾಕರಿಸಬಹುದು. ನ್ಯಾಯಾಧೀಶರು ಸಹಿ ಹಾಕಿದ ನ್ಯಾಯಾಂಗ ವಾರಂಟ್ ಇಲ್ಲದೆ ಐಸಿಇ ಅಧಿಕಾರಿಗಳು ಮನೆಯನ್ನು, ಶಾಲೆ ಅಥವಾ ಖಾಸಗಿ ಕೆಲಸದ ಸ್ಥಳಗಳನ್ನು ಪ್ರವೇಶಿಸುವಂತಿಲ್ಲ. ನಿಮಗೆ ಸುಳ್ಳು ಹೇಳಲು ಐಸಿಇಗೆ ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಆದರೆ ನಿಮಗೆ ಮೌನವಾಗಿರುವ ಹಕ್ಕು ಇದೆ' ಎಂದು ಮಮ್ದಾನಿ ಹೇಳಿದ್ದಾರೆ.





