ಭಾರತದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸಿದ ನ್ಯೂಝಿಲ್ಯಾಂಡ್: ವರದಿ

Photo Credit : ANI
ವೆಲ್ಲಿಂಗ್ಟನ್, ಡಿ.22: ಮುಂದಿನ ಐದು ವರ್ಷಗಳಲ್ಲಿ ದ್ವಿ ಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟುಗೊಳಿಸಲು ಸಹಾಯ ಮಾಡುವ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗಳನ್ನು ಮುಕ್ತಾಯಗೊಳಿಸಿರುವುದಾಗಿ ನ್ಯೂಝಿಲ್ಯಾಂಡ್ ಮತ್ತು ಭಾರತ ಸೋಮವಾರ ಹೇಳಿವೆ. ಇದು ಎರಡೂ ದೇಶಗಳ ನಡುವಿನ ಹೆಚ್ಚಿನ ಸರಕುಗಳ ವ್ಯಾಪಾರವನ್ನು ಸುಂಕಮುಕ್ತಗೊಳಿಸುತ್ತದೆ.
ಈ ಒಪ್ಪಂದವು ಭಾರತಕ್ಕೆ ನ್ಯೂಝಿಲ್ಯಾಂಡ್ನ 95% ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆಗೊಳಿಸುತ್ತದೆ ಮತ್ತು 50%ಕ್ಕಿಂತ ಹೆಚ್ಚು ಉತ್ಪನ್ನಗಳು ಸುಂಕ ಮುಕ್ತವಾಗಿರುತ್ತದೆ. ಭಾರತದ ಎಲ್ಲಾ ಸರಕುಗಳೂ ಸುಂಕ ಮುಕ್ತವಾಗಿ ನ್ಯೂಝಿಲ್ಯಾಂಡ್ ಪ್ರವೇಶಿಸಲು ಅವಕಾಶವಿರುತ್ತದೆ. ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಶತಕೋಟಿ ಡಾಲರ್ ಹೂಡಿಕೆ ಮಾಡಲು ನ್ಯೂಝಿಲ್ಯಾಂಡ್ ಒಪ್ಪಿದೆ. ನ್ಯೂಝಿಲ್ಯಾಂಡ್ನ ವ್ಯಾಪಾರ ಸಚಿವ ಟಾಡ್ ಮೆಕ್ಕ್ಲೇ ಅವರ ಇತ್ತೀಚಿನ ಭಾರತ ಪ್ರವಾಸದ ಬಳಿಕ ಒಪ್ಪಂದವನ್ನು ಅಂತಿಮಗೊಳಿಸಲಾಗಿದ್ದು ಮುಂದಿನ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಸಹಿ ಮಾಡುವ ನಿರೀಕ್ಷೆಯಿದೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿ ಇತರ ದೇಶಗಳೊಂದಿಗೆ ಭಾರತ ಮಾಡಿಕೊಂಡ 18ನೇ ಒಪ್ಪಂದ ಇದಾಗಿದೆ.
`ಈ ಒಪ್ಪಂದದ ಲಾಭಗಳು ವ್ಯಾಪಕ ಮತ್ತು ಮಹತ್ವದ್ದಾಗಿದೆ. ಭಾರತವು ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶ ಮತ್ತು ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿದೆ. ಇದು ನ್ಯೂಝಿಲ್ಯಾಂಡ್ಗೆ ಉದ್ಯೋಗಾವಕಾಶ, ರಫ್ತು ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ' ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಸೇರಿದಂತೆ ಸೇವೆಗಳ ಅಡಿಯಲ್ಲಿ 118 ವಲಯಗಳಿಗೆ ಹೆಚ್ಚಿನ ಪ್ರವೇಶವನ್ನು ನ್ಯೂಝಿಲ್ಯಾಂಡ್ ಅನುಮತಿಸುತ್ತದೆ. ಜೊತೆಗೆ, ನ್ಯೂಝಿಲ್ಯಾಂಡ್ನಲ್ಲಿ 3 ವರ್ಷಗಳವರೆಗೆ ತಾತ್ಕಾಲಿಕ ವೀಸಾಗಳನ್ನು ಬಯಸುವ ಭಾರತೀಯರಿಗೆ 5000 ವೀಸಾಗಳ ಕೋಟಾವನ್ನು ಪರಿಚಯಿಸಲಾಗುವುದು. `ಕೆಲಸ ಮತ್ತು ರಜೆ' ವೀಸಾ ಕಾರ್ಯಕ್ರಮದಡಿ ಸುಮಾರು 1 ಸಾವಿರ ಯುವ ಭಾರತೀಯರು ನ್ಯೂಝಿಲ್ಯಾಂಡ್ ಪ್ರವೇಶಿಸಬಹುದು. ಆರೋಗ್ಯ, ಶಿಕ್ಷಣ, ಐಸಿಟಿ ಮತ್ತು ಇಂಜಿನಿಯರಿಂಗ್ನಂತಹ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು , ನವೀಕರಿಸಲಾಗದ ಮೂರು ವರ್ಷಗಳ ವೀಸಾಗಳ ಮೂಲಕ ವಾರ್ಷಿಕವಾಗಿ ಸರಾಸರಿ 1,667 ನುರಿತ(ಸ್ಕಿಲ್ಡ್) ಭಾರತೀಯ ಉದ್ಯೋಗಿಗಳಿಗೆ ಕೆಲಸ ಮಾಡಲು ನ್ಯೂಝಿಲ್ಯಾಂಡ್ ಅವಕಾಶ ಕಲ್ಪಿಸುತ್ತದೆ.







