ಫಿಲಿಪ್ಪೀನ್ಸ್: ಬಾಂಬ್ ಸ್ಫೋಟದ ಬೆದರಿಕೆ
ವಿಮಾನನಿಲ್ದಾಣಗಳಲ್ಲಿ ಕಟ್ಟೆಚ್ಚರ

ಸಾಂದರ್ಭಿಕ ಚಿತ್ರ
ಮನಿಲ : ವಾಣಿಜ್ಯ ವಿಮಾನಗಳಲ್ಲಿ ಬಾಂಬ್ ಸ್ಫೋಟಿಸಬಹುದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ನ 42 ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಿಸಿರುವುದಾಗಿ ನಾಗರಿಕ ವಿಮಾನಯಾನ ಪ್ರಾಧಿಕಾರ ಶುಕ್ರವಾರ ಹೇಳಿದೆ. ಸೆಬು, ಬಿಕೊಲ್, ದವಾವೊ ಮತ್ತು ಪಲವಾನ್ ದ್ವೀಪಕ್ಕೆ ಪ್ರಯಾಣಿಸುವ ವಿಮಾನಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಈ-ಮೇಲ್ನಲ್ಲಿ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ನ ವಾಣಿಜ್ಯ ವಿಮಾನ ನಿಲ್ದಾಣದಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಫಿಲಿಪ್ಪೀನ್ಸ್ ನ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂಬ್ ಬೆದರಿಕೆಯ ಕುರಿತ ಈ-ಮೇಲ್ ಸಂದೇಶವನ್ನು ಪರಿಶೀಲಿಸಲಾಗುತ್ತಿದ್ದು ಮನಿಲಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಗಸ್ತು ತಂಡ ಹಾಗೂ ಕೆ9 ಘಟಕವನ್ನು ನಿಯೋಜಿಸಲಾಗಿದ್ದು ಕಾನೂನು ಜಾರಿ ಏಜೆನ್ಸಿಗಳು ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ವಿಮಾನಗಳ ನಿಗದಿತ ಪ್ರಯಾಣಕ್ಕೆ ಯಾವುದೇ ಸಮಸ್ಯೆಯಾಗದು ಎಂದು ಸಾರಿಗೆ ಸಚಿವ ಜೇಮ್ ಬ್ಯಟಿಸ್ಟರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.





