ಗಾಝಾ: ಅಲ್-ಶಿಫಾ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಇಸ್ರೇಲಿ ಟ್ಯಾಂಕ್; ಗಾಯಾಳುಗಳ ಸ್ಥಳಾಂತರ ಕಾರ್ಯಕ್ಕೆ ಅಡ್ಡಿ

Photo- PTI
ಗಾಝಾ: ಇಸ್ರೇಲ್ನ ಪದಾತಿ ದಳ ಸೋಮವಾರ ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆಯ ಮುಖ್ಯದ್ವಾರದ ಬಳಿ ತಲುಪಿದ್ದು ಆಸ್ಪತ್ರೆಯಿಂದ ಗಾಯಾಳುಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಆಸ್ಪತ್ರೆಯ ಬಳಿ ಇಸ್ರೇಲ್-ಹಮಾಸ್ ನಡುವೆ ಭಾರೀ ಹೋರಾಟ ಮುಂದುವರಿದಿದೆ ಎಂದು ವರದಿಯಾಗಿದೆ.
ಗಾಝಾ ಪಟ್ಟಿಯ ಉತ್ತರಾರ್ಧವನ್ನು ನಿಯಂತ್ರಣಕ್ಕೆ ಪಡೆಯುವುದು ಇಸ್ರೇಲ್ನ ಪ್ರಧಾನ ಗುರಿಯಾಗಿದೆ. ಈ ಮಧ್ಯೆ ಅಲ್-ಶಿಫಾ ಆಸ್ಪತ್ರೆಯಲ್ಲಿ ಕಳೆದ 3 ದಿನಗಳಲ್ಲಿ 32 ರೋಗಿಗಳು ಸಾವನ್ನಪ್ಪಿದ್ದಾರೆ. ಉತ್ತರ ಗಾಝಾದ ಮತ್ತೊಂದು ಪ್ರಮುಖ ಆಸ್ಪತ್ರೆ ಅಲ್-ಖಿದ್ರಾ ಕೂಡಾ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ರೋಗಿಗಳನ್ನು ಸ್ಥಳಾಂತರಿಸಲು ಆಸ್ಪತ್ರೆಯ ಬಳಿಗೆ ಹೋಗಲು ತಮ್ಮ ಆಂಬ್ಯುಲೆನ್ಸ್ಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ಸಂಸ್ಥೆ ಹೇಳಿದೆ.
ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
► ಒತ್ತೆಯಾಳುಗಳ ಬಿಡುಗಡೆಯಾಗದೆ ಕದನ ವಿರಾಮದ ಮಾತೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ.
► ಯುದ್ಧದಲ್ಲಿ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 11,078ಕ್ಕೆ ಏರಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
► ಉತ್ತರ ಗಾಝಾದಲ್ಲಿನ ಎಲ್ಲಾ ಆಸ್ಪತ್ರೆಗಳೂ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ. ಅಲ್-ಶಿಫಾ ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 6ಕ್ಕೆ ಏರಿದೆ ಎಂದು ವರದಿಯಾಗಿದೆ.
► ಅಲ್-ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಸೇನೆ ಸುತ್ತುವರಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ಜನತೆ, 650 ರೋಗಿಗಳು, 500 ಆರೋಗ್ಯಸೇವೆ ಕಾರ್ಯಕರ್ತರು ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ವಿಶ್ವಸಂಸ್ಥೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
► ಗಾಝಾದಲ್ಲಿನ ಫೆಲೆಸ್ತೀನೀಯನ್ ವಲಸಿಗರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಗಾಝಾದಲ್ಲಿ ಹೊಂದಿರುವ ತೈಲ ಡಿಪೊ ಬರಿದಾಗುತ್ತಿದ್ದು ಕೆಲ ದಿನಗಳಿಗೆ ಸಾಕಾಗುವಷ್ಟು ಇಂಧನ ಮಾತ್ರ ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







