ಫೆಲಸ್ತೀನಿ ಹಕ್ಕುಗಳಿಗೆ ಹೋರಾಟ: ಅಮೆರಿಕ ಸಂಸದೆ ಘೋಷಣೆ

Photo: twitter.com/RepRashida
ವಾಷಿಂಗ್ಟನ್: "ನಾನು ಮೌನವಾಗಿರಲು ಸಾಧ್ಯವಿಲ್ಲ. ನನ್ನ ಮಾತುಗಳಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ. ಫೆಲಸ್ತೀನಿ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇನೆ"- ಎಂದು ಅಮೆರಿಕ ಕಾಂಗ್ರೆಸ್ ನಲ್ಲಿ ಏಕೈಕ ಫೆಲಸ್ತೀನಿ ಅಮೆರಿಕನ್ ಸದಸ್ಯೆಯಾಗಿರುವ ರಶೀದಾ ತ್ಲೈಬ್ ಹೇಳಿದ್ದಾರೆ.
ತಮ್ಮ ವಿರುದ್ಧದ ವಾಗ್ದಂಡನೆ ನಿರ್ಣಯ ವಿರುದ್ಧ ಮಾತನಾಡಿದ ಅವರು, ಇಸ್ರೇಲ್- ಹಮಾಸ್ ಯುದ್ದ ಬಗೆಗಿನ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. "ನಾನು ಇದನ್ನು ಹೇಳಬೇಕು ಎನ್ನುವುದು ನನಗೇ ನಂಬಲಾಗುತ್ತಿಲ್ಲ; ಆದರೆ ಫೆಲಸ್ತೀನಿ ಜನರನ್ನು ಬಳಸಿ ಬಿಸಾಕಲು ಸಾಧ್ಯವಿಲ್ಲ." ಎಂದು ಗದ್ಗದಿತರಾಗಿ ನುಡಿದರು.
" ಫೆಲಸ್ತೀನಿಯನ್ನರ ಅಳಲು ಮತ್ತು ಇಸ್ರೇಲಿ ಮಕ್ಕಳ ಧ್ವನಿ ನಡುವೆ ನನಗೆ ಯಾವುದೇ ಭಿನ್ನತೆ ಇಲ್ಲ" ಎಂದು ರಶೀದಾ ಸ್ಪಷ್ಟಪಡಿಸಿದರು.
ಆ ದಿನ ತಡರಾತ್ರಿ ಡೆಮಾಕ್ರಟಿಕ್ ಪಕ್ಷದ 22 ಮಂದಿ ತ್ಲೈಬ್ ಅವರಿಗೆ ವಾಗ್ದಂಡನೆ ವಿಧಿಸುವ ನಿರ್ಣಯದ ಬಗ್ಗೆ ಬಹುತೇಕ ಎಲ್ಲ ರಿಪಬ್ಲಿಕನ್ನರ ಜತೆಯಾದರು. ಈ ಹಂತದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅವರ ಆಪ್ತ ಬಳಗ, ಅಂದರೆ ಪ್ರಗತಿಪರ ಗುಂಪು ಅವರ ರಕ್ಷಣೆಗೆ ಮುಂದಾಯಿತು.
ಕಾಂಗ್ರೆಸ್ ಸದಸ್ಯರ ಉಚ್ಚಾಟನೆಗಿಂತ ಒಂದು ಹಂತ ಕಡಿಮೆ ಎನಿಸಿದ ವಾಗ್ದಂಡನೆ ನಿರ್ಣಯವನ್ನು ತ್ಲೈಬ್ ವಿರುದ್ಧ ಜಾರ್ಜಿಯಾದ ರಿಪಬ್ಲಿಕನ್ ಸದಸ್ಯ ರಿಚ್ ಮೆಕ್ರಾಮಿಕ್ ಮಂಡಿಸಿದ್ದರು.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ ತಪ್ಪಾಗಿ ವಿವರಣೆ ನಿಡಿದ್ದಾರೆ ಮತ್ತು ಇಸ್ರೇಲ್ ದೇಶದ ಧ್ವಂಸಕ್ಕೆ ಕರೆ ನೀಡಿದ್ದಾರೆ ಎಂದು ಆಪಾದಿಸಿ ಈ ನಿರ್ಣಯ ಮಂಡಿಸಿದ್ದರು. ಇದು ಆಂಗೀಕಾರವಾಗುವ ಮೂಲಕ ರಶೀದಾ 1789ರ ಬಳಿಕ ಈ ಜನಪ್ರತಿನಿಧಿ ಸಭೆಯಲ್ಲಿ ವಾಗ್ದಂಡನೆಗೆ ಗುರಿಯಾದ 26ನೇ ಸದಸ್ಯೆ ಎನಿಸಿಕೊಂಡರು.







