ರಶ್ಯವಿಲ್ಲದೆ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ: ಪುಟಿನ್

ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ಅಮೆರಿಕ ಪ್ರಾಬಲ್ಯದ ಜಾಗತಿಕ ವ್ಯವಸ್ಥೆ ಕ್ರಮೇಣ ದುರ್ಬಲಗೊಳ್ಳುತ್ತಿದೆ. ನಮ್ಮ ದೇಶವು ಈಗ ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ರಚಿಸುವಲ್ಲಿ ಮುಂಚೂಣಿಯಲ್ಲಿದೆ. ಸಾರ್ವಭೌಮ, ಬಲಿಷ್ಟ ರಶ್ಯ ಇಲ್ಲದೆ ಶಾಶ್ವತ, ಸ್ಥಿರ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯು ನಮ್ಮ ದೇಶವನ್ನು ನಾಶಮಾಡುವ ಪಾಶ್ಚಿಮಾತ್ಯರ ಪ್ರಯತ್ನದ ವಿರುದ್ಧ ಅಸ್ತಿತ್ವವಾದದ ಸಂಘರ್ಷವಾಗಿದೆ. ನಾವು ನಮ್ಮ ಜನರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ರಕ್ಷಿಸುತ್ತಿದ್ದೇವೆ. ರಶ್ಯವನ್ನು ಬಲಿಷ್ಟ, ಸ್ವತಂತ್ರ ಶಕ್ತಿಯನ್ನಾಗಿ, ನಾಗರಿಕ ದೇಶವನ್ನಾಗಿ ಉಳಿಸುವ ನಮ್ಮ ಉನ್ನತ ಐತಿಹಾಸಿಕ ಹಕ್ಕನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ರಶ್ಯವನ್ನು ಛಿದ್ರಗೊಳಿಸಲು ಮತ್ತು ಲೂಟಿ ಮಾಡಲು ಪ್ರಯತ್ನಿಸುತ್ತಿವೆ. ನಾವು ಈಗ ರಶ್ಯ ಮಾತ್ರವಲ್ಲ ಇಡೀ ಪ್ರಪಂಚದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಪಾಶ್ಚಿಮಾತ್ಯರಿಗೆ ರುಸೋಫೋಬಿಯಾ(ರಶ್ಯದ ಕುರಿತ ಭಯ) ಕಾಡುತ್ತಿದೆ. ನಮ್ಮ ವೈವಿಧ್ಯತೆ ಮತ್ತು ಸಂಸ್ಕೃತಿ, ಸಂಪ್ರದಾಯ, ಭಾಷೆಗಳು, ಜನಾಂಗೀಯ ಗುಂಪುಗಳ ಏಕತೆಯು ಪಾಶ್ಚಿಮಾತ್ಯ ಜನಾಂಗೀಯ ವಾದಿಗಳು ಮತ್ತು ವಸಾಹತುಶಾಹಿಗಳ ತರ್ಕಕ್ಕೆ, ಅವರು ಹೊಂದಿರುವ ಬೇರ್ಪಡಿಸುವಿಕೆ, ನಿಗ್ರಹ ಮತ್ತು ಶೋಷಣೆಯ ಕ್ರೂರ ಯೋಜನೆಗೆ ಹೊಂದಿಕೆಯಾಗುವುದಿಲ್ಲ.
ಆದ್ದರಿಂದ ಬಲಪ್ರಯೋಗದಿಂದ ನಡೆಸಲು ಆಗದು ಎಂದು ಮನವರಿಕೆ ಆಗಿರುವುದರಿಂದ ಕಲಹವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ದೇಶದ ವಿರುದ್ಧ ಆಕ್ರಮಣಕಾರಿ ಕ್ರಮಗಳಾಗಿ, ನಮ್ಮ ವಿರುದ್ಧ ಹೋರಾಡುವ ಸಾಧನವಾಗಿ, ಮತ್ತೊಮ್ಮೆ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಹುಟ್ಟುಹಾಕುವ ಪ್ರಯತ್ನವಾಗಿ, ಅಂತರ್ ಧರ್ಮೀಯ ಘರ್ಷಣೆ ಹುಟ್ಟುಹಾಕುವ ಪ್ರಯತ್ನವಾಗಿ ಯಾವುದೇ ಬಾಹ್ಯ ಹಸ್ತಕ್ಷೇಪ, ಪ್ರಚೋದನೆಗಳನ್ನು ಮುಂದುವರಿಸಿದರೆ ಅದನ್ನು ನಿಗ್ರಹಿಸುವ ಸಾಮಥ್ರ್ಯ ನಮಗಿದೆ' ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.







