ರಶ್ಯ, ಚೀನಾ ಪರಸ್ಪರ ವಿಸ್ತರಣಾವಾದವನ್ನು ಬೆಂಬಲಿಸುತ್ತಿವೆ: ತೈವಾನ್ ಟೀಕೆ
Photo: NDTV
ತೈಪೆ, ಮೇ 17: ರಶ್ಯ ಮತ್ತು ಚೀನಾ ತಮ್ಮ ಪ್ರಾದೇಶಿಕ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಹಾಯ ಮಾಡುತ್ತಿವೆ. ಪ್ರಜಾಪ್ರಭುತ್ವಗಳು ತಮ್ಮ ಹಕ್ಕುಗಳು ಮತ್ತು ಸಾರ್ವಭೌಮತೆಗೆ ಬೆದರಿಕೆ ಒಡ್ಡುವ ಸರ್ವಾಧಿಕಾರಿ ದೇಶಗಳನ್ನು ಹಿಮ್ಮೆಟ್ಟಿಸಬೇಕು ಎಂದು ತೈವಾನ್ನ ವಿದೇಶಾಂಗ ಸಚಿವ ಜೋಸೆಫ್ ವು ಹೇಳಿದ್ದಾರೆ.
ಚೀನಾ ಪ್ರವಾಸದಲ್ಲಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಜತೆ ನಡೆಸಿದ ಸಭೆಯಲ್ಲಿ ಎರಡೂ ದೇಶಗಳ ನಡುವಿನ ಮಿತಿಯಿಲ್ಲದ ಸಹಭಾಗಿತ್ವವನ್ನು ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜೋಸೆಫ್ ವು `ಬೀಜಿಂಗ್ಗೆ ಪುಟಿನ್ ಭೇಟಿಯು ಎರಡು ದೊಡ್ಡ ನಿರಂಕುಶ ದೇಶಗಳು ಪರಸ್ಪರ ಬೆಂಬಲಿಸುವ, ಪರಸ್ಪರ ಒಟ್ಟಾಗಿ ಕೆಲಸ ಮಾಡುವ, ಪರಸ್ಪರರ ವಿಸ್ತರಣಾವಾದವನ್ನು ಬೆಂಬಲಿಸುವ ಉದಾಹರಣೆಯಾಗಿದೆ. ಯುರೋಪ್, ದಕ್ಷಿಣ ಚೀನಾ ಸಮುದ್ರ ಮತ್ತು ಅದರಾಚೆಗೆ ರಶ್ಯ ಮತ್ತು ಚೀನಾದ ಮಿಲಿಟರಿ ಪ್ರತಿಪಾದನೆಯನ್ನು ಎದುರಿಸಲು ಪ್ರಜಾಪ್ರಭುತ್ವಗಳು ಒಗ್ಗೂಡಬೇಕು ' ಎಂದರು.
ರಶ್ಯದ ಎದುರಿನ ಯುದ್ಧದಲ್ಲಿ ಪಾಶ್ಚಿಮಾತ್ಯ ಶಕ್ತಿಗಳು ಉಕ್ರೇನ್ಗೆ ಬೆಂಬಲವನ್ನು ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವ ದೇಶಗಳು ಪರಸ್ಪರರ ರಕ್ಷಣೆಗೆ ಧಾವಿಸುತ್ತವೆ ಎಂಬ ಸಂದೇಶವನ್ನು ರವಾನಿಸಬೇಕು. ಒಂದು ವೇಳೆ ಉಕ್ರೇನ್ ಸೋತರೆ, ಅದು ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಚೀನಾಕ್ಕೆ ಪ್ರೇರಣೆ ನೀಡಿದಂತಾಗಬಹುದು ಎಂದವರು ಎಚ್ಚರಿಕೆ ನೀಡಿದ್ದಾರೆ.