ರಫಾ ದಾಳಿಗೆ ಪ್ರತಿಭಟನೆ | ಇಸ್ರೇಲ್ನಲ್ಲಿನ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡ ಬ್ರೆಝಿಲ್

ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಲುಲಾ ದ ಸಿಲ್ವಾ | PC : timesofindia.
ಬ್ರೆಸಿಲಿಯಾ : ರಫಾದಲ್ಲಿ ನಿರಾಶ್ರಿತ ಶಿಬಿರಗಳ ಮೇಲೆ ಮಂಗಳವಾರ ಇಸ್ರೇಲಿ ಸೇನೆಯ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಗೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬ್ರೆಝಿಲ್ ಬುಧವಾರ ಇಸ್ರೇಲ್ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಸದ್ಯಕ್ಕೆ ತಾನು ಇಸ್ರೇಲ್ಗೆ ನೂತನ ರಾಯಬಾರಿಯನ್ನು ನೇಮಿಸುವುದಿಲ್ಲವೆಂದು ಅದು ತಿಳಿಸಿದೆ.
ಗಾಝಾದ ಸಂಘರ್ಷದ ಬಳಿಕ ಬ್ರೆಝಿಲ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿದೆ. ಗಾಝಾದಲ್ಲಿ ಇಸ್ರೇಲ್ ಸರಕಾರವು ಜನಾಂಗೀಯ ಹತ್ಯಾಕಾಂಡದಲ್ಲಿ ತೊಡಗಿದೆಯೆಂದು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಲುಲಾ ದ ಸಿಲ್ವಾ ಅವರು ಆಪಾದಿಸಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ಇಸ್ರೇಲ್, ಬ್ರೆಝಿಲ್ನ ಅಧ್ಯಕ್ಷರು ಓರ್ವ ಅಸ್ವೀಕಾರಾರ್ಹ ವ್ಯಕ್ತಿಯೆಂದು ನಿಂದಿಸಿತ್ತು.
ಆನಂತರ ಇಸ್ರೇಲ್, ಬ್ರೆಝಿಲ್ನ ರಾಯಭಾರಿ ಪ್ರೆಡ್ರಿಕೊ ಮೆಯೆರ್ ಅವರನ್ನು ಜೆರುಸಲೇಂನಲ್ಲಿರುವ ಯಾದ್ ವಾಶೆಮ್ ಹೊಲೊಕಾಸ್ಟ್ ಸ್ಮಾರಕ ಕೇಂದ್ರಕ್ಕೆ ಕರೆಸಿಕೊಂಡು, ಬ್ರೆಝಿಲ್ ಅಧ್ಯಕ್ಷರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ರೆಝಿಲ್ ತನ್ನ ದೇಶದಲ್ಲಿನ ಇಸ್ರೇಲ್ ರಾಯಭಾರಿಗೆ ಸಮನ್ಸ್ ನೀಡಿತ್ತು.
ಇಸ್ರೇಲ್ನ ಈ ನಡೆಯನ್ನು ಖಂಡಿಸಿದ ಬ್ರೆಝಿಲ್, ತನ್ನ ರಾಯಭಾರಿಯನ್ನು ಅಪಮಾನಿಸಲಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿತ್ತು ಹಾಗೂ ರಾಯಭಾರಿ ಫ್ರೆಡ್ರಿಕೊ ಮೆಯೆರ್ ಅವರನ್ನು ಹಿಂದಕ್ಕೆ ಕರೆಸಿಕೊಂಡಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.