ಲೆಬನಾನ್ | ಅಮೆರಿಕ ದೂತಾವಾಸದ ಮೇಲೆ ದಾಳಿಗೆ ಪ್ರಯತ್ನ
ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ದಾಳಿಗೆ ಪ್ರಯತ್ನಿಸಿದ ಬಂದೂಕುಧಾರಿಯನ್ನು ಬಂಧಿಸಿರುವುದಾಗಿ ಸೇನಾಪಡೆ ಬುಧವಾರ ಹೇಳಿದೆ.
ರಾಯಭಾರಿ ಕಚೇರಿಯ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿಯ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ಆತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಆರೋಪಿ ಸಿರಿಯಾ ಪ್ರಜೆಯೆಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಸೇನೆಯ ಮೂಲಗಳು ಹೇಳಿವೆ.
ಬೈರೂತ್ನ ಉತ್ತರದಲ್ಲಿರುವ ಔಕರ್ನ ಹೊರವಲಯದಲ್ಲಿರುವ ಅಮೆರಿಕದ ರಾಜತಾಂತ್ರಿಕ ಕಚೇರಿಯ ಮೇಲೆ ದಾಳಿ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ 3 ಮಂದಿ ದೂತಾವಾಸದ ಬಳಿ ಬಂದಿದ್ದು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯ ಪ್ರತಿದಾಳಿಯಲ್ಲಿ ಓರ್ವ ಶಂಕಿತ ಹತನಾಗಿದ್ದು ಒಬ್ಬ ಪರಾರಿಯಾಗಿದ್ದಾನೆ. ಮೂರನೆ ಆರೋಪಿ ಗುಂಡೇಟಿನಿಂದ ಗಾಯಗೊಂಡಿದ್ದು ಆತನನ್ನು ಬಂಧಿಸಲಾಗಿದೆ ಎಂದು ಲೆಬನಾನ್ನ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.