ಉಕ್ರೇನ್ನಲ್ಲಿ ರಶ್ಯಕ್ಕೆ ಸಂಪೂರ್ಣ ಬೆಂಬಲ | ಉತ್ತರ ಕೊರಿಯಾ ವಾಗ್ದಾನ
ವ್ಲಾದಿಮಿರ್ ಪುಟಿನ್ , ಕಿಮ್ ಜಾಂಗ್ ಉನ್ : PC : PTI
ಪೋಂಗ್ಯಾಂಗ್: ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ರೊಂದಿಗೆ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದರು. ಉಕ್ರೇನ್ ಯುದ್ಧದಲ್ಲಿ ರಶ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಿಮ್ ಜಾಂಗ್ ವಾಗ್ದಾನ ನೀಡಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಉಭಯ ಮುಖಂಡರು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಳಿಕ ಮಾತನಾಡಿದ ಪುಟಿನ್ ` ಉತ್ತರ ಕೊರಿಯಾದೊಂದಿಗೆ ಮಿಲಿಟರಿ ತಾಂತ್ರಿಕ ಸಹಕಾರವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ' ಎಂದರು.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ಉತ್ತರ ಕೊರಿಯಾ ಶಸ್ತ್ರಾಸ್ತ್ರ ನೆರವನ್ನು ಒದಗಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ರಶ್ಯವು ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮ ಅಭಿವೃದ್ಧಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ಪ್ರತಿಪಾದಿಸುತ್ತಿವೆ. `ರಕ್ಷಣೆಯ ಉದ್ದೇಶದ ಒಪ್ಪಂದ ಇದಾಗಿದ್ದು ಇದು ಹೊಸ ಬಹುದ್ರುವ ಪ್ರಪಂಚದ ಸೃಷ್ಟಿಯನ್ನು ವೇಗಗೊಳಿಸುವ ಪ್ರೇರಕ ಶಕ್ತಿಯಾಗಲಿದೆ ಎಂದು ಕಿಮ್ಜಾಂಗ್ ಉನ್ ಹೇಳಿರುವುದಾಗಿ ರಶ್ಯದ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಉಭಯ ದೇಶಗಳು ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಸಹಕಾರದ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ವರದಿ ಹೇಳಿದೆ.