ಅಮೆರಿಕದ ತೆರಿಗೆ ನೀತಿಯಿಂದ ಭಾರತಕ್ಕೆ ವಿನಾಯಿತಿ ಇಲ್ಲ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ
ನನ್ನೊಂದಿಗೆ ಯಾರೂ ವಾದ ಮಾಡುವಂತಿಲ್ಲ ಎಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್: ಅಮೆರಿಕದ ಪರಸ್ಪರ ಸಮಾನ ತೆರಿಗೆಯಿಂದ ಭಾರತಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ʼಫಾಕ್ಸ್ ನ್ಯೂಸ್ʼ ಸುದ್ದಿ ಸಂಸ್ಥೆಯ ಸಿಯಾನ್ ಹ್ಯಾನಿಟಿಗೆ ಉದ್ಯಮಿ ಎಲಾನ್ ಮಸ್ಕ್ ರೊಂದಿಗೆ ಜಂಟಿ ಸಂದರ್ಶನ ನೀಡಿರುವ ಡೊನಾಲ್ಡ್ ಟ್ರಂಪ್, ಜಾಗತಿಕ ವ್ಯವಹಾರ ಹಾಗೂ ಅಮೆರಿಕ ಮತ್ತು ಅದರ ಪಾಲುದಾರ ದೇಶಗಳ ನಡುವಿನ ಹಾಲಿ ತೆರಿಗೆ ದರಗಳ ಕುರಿತ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದಿದ್ದಾಗ, ನಾವು ಪರಸ್ಪರ ಸಮಾನ ತೆರಿಗೆ ವಿಧಿಸಲಿದ್ದೇವೆ. ನೀವೇನು ತೆರಿಗೆ ವಿಧಿಸುತ್ತೀರೊ, ನಾವೂ ಅದನ್ನೇ ವಿಧಿಸುತ್ತೇವೆ ಎಂದು ಅವರಿಗೆ ಹೇಳಿದೆ. ಅದಕ್ಕವರು, “ಇಲ್ಲ, ಇಲ್ಲ, ನಾನದನ್ನು ಇಷ್ಟ ಪಡುವುದಿಲ್ಲ” ಅಂದರು. ನಾನದಕ್ಕೆ, “ಇಲ್ಲ, ಇಲ್ಲ, ನೀವೇನು ತೆರಿಗೆ ವಿಧಿಸುತ್ತೀರೊ, ನಾನೂ ಅದನ್ನೇ ವಿಧಿಸುತ್ತೇನೆ. ನಾನದನ್ನು ಎಲ್ಲ ದೇಶಗಳೊಂದಿಗೂ ಮಾಡುತ್ತಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿಯೊಂದಿಗಿನ ತಮ್ಮ ಭೇಟಿಯನ್ನು ಡೊನಾಲ್ಡ್ ಟ್ರಂಪ್ ಸ್ಮರಿಸಿದ್ದಾರೆ.
“ನನ್ನೊಂದಿಗೆ ಯಾರೂ ವಾದ ಮಾಡುವಂತಿಲ್ಲ” ಎಂದು ಒತ್ತಿ ಹೇಳಿರುವ ಟ್ರಂಪ್, “ನಾನು ಶೇ. 25ರಷ್ಟು ತೆರಿಗೆ ಎಂದಾಗ, ಅವರು ಇದು ತುಂಬಾ ಭಯಾನಕ ಎಂದರು. ನಾನು ಮತ್ತೇನೂ ಮಾತನಾಡಲಿಲ್ಲ. ಯಾಕೆಂದರೆ, ಅವರೇನು ತೆರಿಗೆ ವಿಧಿಸುತ್ತಾರೊ, ಅಷ್ಟನ್ನೇ ನಾವೂ ವಿಧಿಸುತ್ತೇವೆ. ಆಗ ಅವರು ಹಾಗೆ ಮಾಡುವುದನ್ನು ನಿಲ್ಲಿಸುತ್ತಾರೆ” ಎಂದು ಹೇಳಿದ್ದಾರೆ.
ಅಮೆರಿಕ ಕೆಲವು ಆಮದುಗಳ ಮೇಲೆ ಇಡೀ ವಿಶ್ವದಲ್ಲೇ ಭಾರತ ಅತ್ಯಧಿಕ ತೆರಿಗೆ ವಿಧಿಸುತ್ತಿದ್ದು, ನಿರ್ದಿಷ್ಟವಾಗಿ ಆಟೊಮೊಬೈಲ್ ವಲಯದ ಮೇಲೆ ದುಬಾರಿ ತೆರಿಗೆ ವಿಧಿಸುತ್ತಿದೆ. ಇದರನ್ವಯ ವಿದೇಶಿ ಕಾರುಗಳ ಮೇಲಿನ ಸುಂಕ ಶೇ. 100ರವರೆಗೂ ತಲುಪಬಹುದಾಗಿದೆ.
ಡೊನಾಲ್ಡ್ ಟ್ರಂಪ್ ಪಕ್ಕದಲ್ಲೇ ಕುಳಿತಿದ್ದ ಎಲಾನ್ ಮಸ್ಕ್ ಕೂಡಾ ಈ ಅಂಶವನ್ನು ದೃಢಪಡಿಸಿದ್ದು, “ಆಟೊಮೊಬೈಲ್ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.







