ಯೆಮೆನ್ ಜೈಲಿನಲ್ಲಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ತಾತ್ಕಾಲಿಕ ಮುಂದೂಡಿಕೆ: ತಲಾಲ್ ಕುಟುಂಬದಿಂದ ತೀವ್ರ ವಿರೋಧ
ಶಿಕ್ಷೆ ವಿಳಂಬವಾದರೂ ತಪ್ಪಿಸಲಾಗದು, ದೇವರಿದ್ದಾನೆ ಎಂದ ತಲಾಲ್ ಸಹೋದರ

ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ | Photo : reporterlive.com
ಸನಾ (ಯೆಮೆನ್): ಯೆಮೆನ್ನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ, ಕೊಲೆಯಾದ ತಲಾಲ್ ಅಬ್ದುಲ್ ಮಹ್ದಿ ಅವರ ಕುಟುಂಬ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ತಲಾಲ್ ಅವರ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ ಫೇಸ್ಬುಕ್ನಲ್ಲಿ ನೀಡಿದ ಪ್ರತಿಕ್ರಿಯೆಯಲ್ಲಿ, “ಸತ್ಯವನ್ನು ಮರೆಯಲಾಗದು, ಶಿಕ್ಷೆ ವಿಳಂಬವಾದರೂ ತಪ್ಪಿಸಲಾಗದು,” ಎಂದು ತಿಳಿಸಿದ್ದಾರೆ. ಅವರು ರಾಜಿ ಪ್ರಕ್ರಿಯೆಯನ್ನು, ಕ್ಷಮೆ ನೀಡುವ ಚರ್ಚೆಯನ್ನೂ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ತಲಾಲ್ ಅವರ ಕುಟುಂಬ, ಮರಣದಂಡನೆಯ ಜಾರಿಗೆ ಯಾವುದೇ ವಿಳಂಬ ಅಥವಾ ರಾಜಿಕ್ರಮವನ್ನು ಒಪ್ಪುವುದಿಲ್ಲ ಎಂಬ ನಿಲುವಿನಲ್ಲಿ ನಿಂತಿದೆ. “ಪರಿಹಾರ ಹಣದಿಂದ ಕಳೆದುಹೋದ ಜೀವವನ್ನು ಖರೀದಿಸಲು ಸಾಧ್ಯವಿಲ್ಲ. ಪ್ರತೀಕಾರ ತಪ್ಪದು,” ಎಂದು ತಲಾಲ್ ಅವರ ಸಹೋದರ ಕಠಿಣ ಹೇಳಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ತಲಾಲ್ ಸಹೋದರ, ಅಬ್ದುಲ್ ಫತ್ತಾಹ್, “ನಮ್ಮ ಪ್ರಕರಣದಲ್ಲಿ ಹಲವು ವರ್ಷಗಳಿಂದ ಗುಪ್ತ ಪ್ರಯತ್ನಗಳು ಮತ್ತು ದೊಡ್ಡ ಮಟ್ಟದ ಮಧ್ಯಸ್ಥಿಕೆ ನಡೆದಿವೆ. ಇಂತಹ ಪ್ರಯತ್ನಗಳು ಇಂದು ನಡೆಯುತ್ತಿರುವುದು ಹೊಸದಲ್ಲ, ಇದರಲ್ಲೇನೂ ಆಶ್ಚರ್ಯವಿಲ್ಲ. ಆದರೆ, ನಮ್ಮ ನಿಲುವು ಬದಲಾಗಿಲ್ಲ. ನಮ್ಮ ಬೇಡಿಕೆ ಸ್ಪಷ್ಟ: ಇದು ಪ್ರತೀಕಾರದ ಪ್ರಶ್ನೆ, ಕ್ಷಮಾಪಣೆಯ ಪ್ರಶ್ನೆಯಲ್ಲ,” ಎಂಬುದು ಅವರ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮರಣದಂಡನೆಯ ಮುಂದೂಡಿಕೆಯನ್ನು ಅವರು ‘ದುರದೃಷ್ಟಕರ' ಎಂದು ತಿಳಿಸಿದ್ದಾರೆ. ಅವರು ಈ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ. ಮರಣದಂಡನೆ ನಿಗದಿಯಾದ ಬಳಿಕ ಅದನ್ನು ಸ್ಥಗಿತಗೊಳಿಸುವುದು ಹೆಚ್ಚು ಕಠಿಣ. ಈ ಪ್ರಕರಣದಲ್ಲಿ ಯಾವುದೇ ರೀತಿಯ ಸಮನ್ವಯ ಅಥವಾ ರಾಜತಾಂತ್ರಿಕ ಒತ್ತಡಗಳನ್ನು ತಿರಸ್ಕರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
“ನಾವು ಒತ್ತಡಗಳಿಗೆ ಬಾಗುವುದಿಲ್ಲ. ಪರಿಹಾರ ಹಣದಿಂದ ಕಳೆದುಹೋದ ಜೀವವನ್ನು ಖರೀದಿಸುವುದು ಸಾಧ್ಯವಿಲ್ಲ, ನ್ಯಾಯವನ್ನು ಮರೆಯಲು ಸಾಧ್ಯವಿಲ್ಲ. ಶಿಕ್ಷೆಯು, ವಿಳಂಬವಾದರೂ ಆಗಲೇಬೇಕು. ಸಮಯ ವಿಳಂಬವಾಗಿರಬಹುದು. ದೇವರ ಸಹಾಯದಿಂದ ಅದು ಸಾದ್ಯವಾಗುತ್ತದೆ,” ಎಂದು ಅಬ್ದುಲ್ ಫತ್ತಾಹ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಾ ಪ್ರಿಯಾ, ತಮ್ಮ ಪತಿ ಮತ್ತು ಮಗನೊಂದಿಗೆ 2012ರಲ್ಲಿ ಯೆಮೆನ್ಗೆ ತೆರಳಿದ್ದರು. ನರ್ಸ್ ಆಗಿದ್ದ ನಿಮಿಷಪ್ರಿಯಾ ಯೆಮನ್ ನಲ್ಲಿಯೇ ಕೆಲಸ ಮುಂದುವರೆಸಿದರು. ಅವರ ಪತಿ ಟಾಮಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಈ ಮಧ್ಯೆ, ಅವರು ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರನ್ನು ಭೇಟಿಯಾದರು. ತಲಾಲ್ ಅವರ ಸಹಾಯವನ್ನು ಪಡೆದು ವ್ಯಾಪಾರ ಪಾಲುದಾರಿಕೆಯಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ದೇಶದ ಯಾರೊಬ್ಬರ ಸಹಾಯವಿಲ್ಲದೆ ಯೆಮೆನ್ನಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸುವುದು ಅಸಾಧ್ಯವಾಗಿತ್ತು.
ಕ್ಲಿನಿಕ್ ಅನ್ನು ಪ್ರಾರಂಭಿಸಿದ ನಂತರ, ತಲಾಲ್ ನಿಮಿಷಪ್ರಿಯಾ ತನ್ನ ಹೆಂಡತಿ ಎಂದು ಎಲ್ಲರನ್ನೂ ನಂಬುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಅದಕ್ಕಾಗಿ ಆತ ನಕಲಿ ವಿವಾಹ ಪ್ರಮಾಣಪತ್ರವನ್ನು ಮಾಡಿದ್ದರು. ನಂತರ, ನಿಮಿಷಾರನ್ನು ಬೆದರಿಸುವ ಮೂಲಕ, ಧಾರ್ಮಿಕ ಪದ್ಧತಿಗಳ ಪ್ರಕಾರ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ.
ತಲಾಲ್, ನಿಮಿಷಾ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಕ್ಲಿನಿಕ್ ನಿಂದ ಎಲ್ಲಾ ಆದಾಯವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಅಲ್ಲದೇ ನಿಮಿಷಾರ ಪಾಸ್ಪೋರ್ಟ್ ತನ್ನ ವಶಕ್ಕೆ ತೆಗೆದುಕೊಂಡು ಆಕೆಯ ಬಳಿ ಇದ್ದ ಚಿನ್ನವನ್ನು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ. ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿದ ನಿಮಿಷಾ, ಮುಂದೆ ಸಹಿಸಲಾರದಿದ್ದಾಗ, ಅಲ್ಲಿನ ಅಧಿಕಾರಿಗಳಿಗೆ ದೂರು ನೀಡಿದರು. ತನ್ನ ಪಾಸ್ ಪೋರ್ಟ್ ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ, ತಲಾಲ್ ಗೆ ನೀಡಿದ ಅರವಳಿಕೆಯ ಪ್ರಮಾಣ ಹೆಚ್ಚಾದ್ದರಿಂದ ತಲಾಲ್ ಮೃತಪಟ್ಟಿದ್ದಾರೆ ಎಂದು ತನಿಖೆಯು ತಿಳಿಸಿದೆ.
ಈ ಮಧ್ಯೆ ಜು.16ಕ್ಕೆ ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಯನ್ನು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಯೆಮೆನ್ನ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಬಿನ್ ಹಬೀಬ್ ಅವರ ಹಸ್ತಕ್ಷೇಪದಿಂದ ಮುಂದೂಡಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ. 'ಸೇವ್ ನಿಮಿಷಾ ಪ್ರಿಯಾ ಕ್ರಿಯಾ ಮಂಡಳಿ'ಯು ಇದಕ್ಕೆ ಸಹಕಾರ ನೀಡಿದೆ.







