ಸುಡಾನ್ನಲ್ಲಿ ಸಮಾನಾಂತರ ಸರ್ಕಾರ ರಚಿಸಿದ ಅರೆ ಸೇನಾಪಡೆ

ಸಾಂದರ್ಭಿಕ ಚಿತ್ರ - Photo Credit : AP
ದಾರ್ಫುರ್, ಜು.28: ಸುಡಾನ್ನಲ್ಲಿ ಸೇನಾಪಡೆ ಮತ್ತು ಅರೆ ಸೇನಾಪಡೆಯ ನಡುವಿನ ಬಿಕ್ಕಟ್ಟು ತೀವ್ರಗೊಂಡಿದ್ದು ಪಶ್ಚಿಮದ ದಾರ್ಫುರ್ ಪ್ರಾಂತದಲ್ಲಿ ಪ್ರಾಬಲ್ಯ ಸಾಧಿಸಿರುವ ಅರೆ ಸೇನಾಪಡೆ ಸಮಾನಾಂತರ ಸರ್ಕಾರ ರಚಿಸಿರುವುದಾಗಿ ಘೋಷಿಸಿದೆ.
ಅರೆ ಸೇನಾಪಡೆ `ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್ಎಸ್ಎಫ್) ನೇತೃತ್ವದ ತ್ಯಾಸಿಸ್ ಮೈತ್ರಿಕೂಟವು ಅರೆ ಸೇನಾಪಡೆಯ ಕಮಾಂಡರ್ ಜ| ಮುಹಮ್ಮದ್ ಹಮ್ದನ್ ಡಗಾಲೋ ಅವರನ್ನು ಹೊಸ ಆಡಳಿತದಲ್ಲಿ ಸಾರ್ವಭೌಮ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ. 15 ಸದಸ್ಯರ ಸಮಿತಿಯು ಆಡಳಿತವನ್ನು ನಿರ್ವಹಿಸಲಿದೆ. ಮೈತ್ರಿಕೂಟದ ವಕ್ತಾರ ಅಲಾ ಅಲ್-ದೀನ್ ನಖದ್ ದಾರ್ಫುರ್ನ ನಯಾಲಾ ನಗರದಿಂದ ನೀಡಿದ ವೀಡಿಯೊ ಹೇಳಿಕೆಯಲ್ಲಿ ಹೊಸ ಆಡಳಿತವನ್ನು ಘೋಷಿಸಿದ್ದಾರೆ. 2019ರಲ್ಲಿ ಅಲ್-ಬಶಿರ್ ಆಡಳಿತವನ್ನು ಪದಚ್ಯುತಗೊಳಿಸಿದ ಬಳಿಕ ಸುಡಾನ್ನಲ್ಲಿ ಅಧಿಕಾರದಲ್ಲಿರುವ ಮಿಲಿಟರಿ-ನಾಗರಿಕ ಸಾರ್ವಭೌಮ ಸಮಿತಿಯ ಸದಸ್ಯ ಮುಹಮ್ಮದ್ ಹಸನ್ ಅಲ್-ತಯಿಷಿ ಆರ್ಎಸ್ಎಫ್ ನಿಯಂತ್ರಣದ ಸರಕಾರದ ಪ್ರಧಾನಿಯಾಗಲಿದ್ದಾರೆ. ಬಂಡುಕೋರ ನಾಯಕ, ಸುಡಾನ್ ಪೀಪಲ್ಸ್ ಲಿಬರೇಷನ್ ಮೂವ್ಮೆಂಟ್ -ನಾರ್ಥ್ನ ಮುಖ್ಯಸ್ಥ ಅಬ್ದಲಝೀಜ್ ಅಲ್-ಹಿಲು ಸಮಿತಿಯ ಉಪ ಮುಖ್ಯಸ್ಥರಾಗಿರುತ್ತಾರೆ. ಐದು ತಿಂಗಳ ಹಿಂದೆ ಕೆನ್ಯಾದ ರಾಜಧಾನಿ ನೈರೋಬಿಯಲ್ಲಿ ಆರ್ಎಸ್ಎಫ್ ಹಾಗೂ ಅದರ ಮಿತ್ರರು ಸುಡಾನ್ನಲ್ಲಿ ಆರ್ಎಸ್ಎಫ್ ನಿಯಂತ್ರಣದ ಪ್ರದೇಶದಲ್ಲಿ ಸಮಾನಾಂತರ ಸರ್ಕಾರ ಸ್ಥಾಪಿಸುವ ಬಗ್ಗೆ ದಾಖಲೆಗೆ ಸಹಿ ಹಾಕಿದ್ದರು.
ಸುಡಾನ್ ರಾಜಧಾನಿ ಖಾರ್ಟುಮ್ನಲ್ಲಿರುವ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರ ಸಮನಾಂತರ ಸರ್ಕಾರದ ಘೋಷಣೆಯನ್ನು ಖಂಡಿಸಿದ್ದು ಈ ನಕಲಿ ಸರ್ಕಾರವನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಬಾರದು ಎಂದು ಆಗ್ರಹಿಸಿದೆ.





