ಕರಡು ಒಪ್ಪಂದದ ಅಂಶಗಳ ಪರಿಶೀಲನೆ ಬಳಿಕ ಮುಂದಿನ ಕ್ರಮ: ಇರಾನ್ ಹೇಳಿಕೆ

Photo Credit : AP , PTI
ಟೆಹರಾನ್, ಮೇ 27: ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕದೊಂದಿಗೆ ಸಂಭಾವ್ಯ ಕರಡು ಒಪ್ಪಂದವು ಇರಾನ್ ನ ಕೈ ಸೇರಿದ್ದು, ಅದರ ಪರಿಶೀಲನೆ ನಡೆಯುತ್ತಿದೆ ಎಂದು ಇರಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ಒಪ್ಪಂದದ ಚೌಕಟ್ಟಿನ ಪ್ರಕಾರ, ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗು ಸಂಚಾರವನ್ನು ಒಂದು ತಿಂಗಳೊಳಗೆ ಯುದ್ಧಪೂರ್ವದ ಮಟ್ಟಕ್ಕೆ ಪುನಃ ಸ್ಥಾಪಿಸಲಿದೆ. ಅಮೆರಿಕವು ಇರಾನ್ ನ ಸಮೀಪದಿಂದ ತನ್ನ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಲಿದೆ ಹಾಗೂ ನೌಕಾ ದಿಗ್ಬಂಧನವನ್ನು ತೆರವುಗೊಳಿಸಲಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಮಿಲಿಟರಿ ಹಡಗುಗಳ ಸಂಚಾರದ ಕುರಿತು ಕರಡು ಒಪ್ಪಂದದಲ್ಲಿ ಉಲ್ಲೇಖ ಇಲ್ಲ. ವಾಣಿಜ್ಯ ಸಂಚಾರ, ಹಡಗುಗಳ ತಪಾಸಣೆ ಮತ್ತು ‘ಸೇವಾ ಶುಲ್ಕ’ ವಿಧಿಸುವ ಅಧಿಕಾರವು ನೆರೆಯ ಒಮಾನ್ ನೊಂದಿಗೆ ಸಮನ್ವಯದಡಿ ಇರಾನ್ ನಲ್ಲೇ ಉಳಿಯಲಿದೆ. ಆದರೆ ಕರಡು ಒಪ್ಪಂದದ ಸಮಗ್ರ ಪರಿಶೀಲನೆ ನಡೆಸದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
60 ದಿನಗಳೊಳಗೆ ಅಂತಿಮ ಒಪ್ಪಂದಕ್ಕೆ ಬಂದರೆ, ಅದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವಾಗಿ ಅಂಗೀಕರಿಸಬಹುದಾಗಿದೆ. ಆದರೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಅಮೆರಿಕದ ಕ್ರಮಗಳ ಸ್ಪಷ್ಟ ಪರಿಶೀಲನೆಯಿಲ್ಲದೆ ಯಾವುದೇ ಬದ್ಧತೆಗಳನ್ನು ಜಾರಿಗೆ ತರುವುದಿಲ್ಲ ಎಂದು ಇರಾನ್ ಹೇಳಿದೆ.






