ನೈಜರ್: ಫ್ರಾನ್ಸ್ ರಾಯಭಾರಿಗೆ ನಿರ್ಬಂಧ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್
ಪ್ಯಾರಿಸ್: ಪಶ್ಚಿಮ ಆಫ್ರಿಕಾದ ನೈಜರ್ ದೇಶದಲ್ಲಿ ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಅಧಿಕಾರ ವಶಕ್ಕೆ ಪಡೆದಿರುವ ಸೇನಾಡಳಿತವು ಫ್ರಾನ್ಸ್ ರಾಯಭಾರಿಯನ್ನು ರಾಯಭಾರ ಕಚೇರಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಶುಕ್ರವಾರ ಹೇಳಿದ್ದಾರೆ.
ನೈಜರ್ ನಲ್ಲಿರುವ ನಮ್ಮ ರಾಯಭಾರಿ ಮತ್ತು ರಾಜತಾಂತ್ರಿಕ ಸದಸ್ಯರನ್ನು ಫ್ರಾನ್ಸಿನ ರಾಯಭಾರಿ ಕಚೇರಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದ್ದು ಅವರಿಗೆ ಆಹಾರ ಪೂರೈಸುವುದನ್ನೂ ನಿರ್ಭಂಧಿಸಲಾಗಿದೆ. ಅವರು ಈಗ ಸೇನೆಯ ಪಡಿತರವನ್ನು ತಿನ್ನುತ್ತಿದ್ದಾರೆ ಎಂದು ಮ್ಯಾಕ್ರನ್ ಹೇಳಿದ್ದಾರೆ.
ಜುಲೈ 26ರಂದು ಅಧ್ಯಕ್ಷ ಮುಹಮ್ಮದ್ ಬರೌಮ್ರನ್ನು ಪದಚ್ಯುತಗೊಳಿಸಿದ್ದ ಸೇನೆ, 48 ಗಂಟೆಯೊಳಗೆ ದೇಶಬಿಟ್ಟು ತೆರಳುವಂತೆ ಫ್ರಾನ್ಸ್ ರಾಯಭಾರಿ ಸಿಲ್ವಿಯಾನ್ ಗೆ ಸೂಚಿಸಿತ್ತು. ಆದರೆ ಸೇನಾಡಳಿತವನ್ನು ಮಾನ್ಯ ಮಾಡದ ಫ್ರಾನ್ಸ್, ಈ ಆದೇಶ ಪಾಲನೆಗೆ ನಿರಾಕರಿಸಿದ್ದು ಸಿಲ್ವಿಯಾನ್ ನೈಜರ್ ನಲ್ಲಿರುವ ರಾಯಭಾರಿ ಕಚೇರಿಯಲ್ಲೇ ಉಳಿದಿದ್ದರು. ‘ನಮ್ಮ ರಾಯಭಾರಿಯನ್ನು ವಾಪಾಸು ಕಳುಹಿಸುವ ಬಗ್ಗೆ ನೈಜರ್ ಅಧ್ಯಕ್ಷ ಬರೌಮ್ ನಿರ್ಧರಿಸಬೇಕು. ಅಂತರಾಷ್ಟ್ರೀಯ ಸಮುದಾಯ ಈಗಲೂ ಅವರೇ ನೈಜರ್ ನ ಮುಖ್ಯಸ್ಥ ಎಂದು ಪರಿಗಣಿಸಿದೆ. ನೈಜರ್ ನಲ್ಲಿರುವ ನಮ್ಮ ಸುಮಾರು 1,500 ಯೋಧರನ್ನು ವಾಪಾಸು ಕರೆಸಿಕೊಳ್ಳುವುದೂ ಬರೌಮ್ರ ಸೂಚನೆಯನ್ನು ಅವಲಂಬಿಸಿದೆ’ ಎಂದು ಮ್ಯಾಕ್ರನ್ ಸ್ಪಷ್ಟಪಡಿಸಿದ್ದಾರೆ. ಫ್ರಾನ್ಸಿನ ಹಾಗೆಯೇ ನಾವು ಕೂಡಾ ನೈಜರ್ ಸೇನಾಡಳಿತವನ್ನು ಮಾನ್ಯ ಮಾಡುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ವಿದೇಶ ವ್ಯವಹಾರ ವಿಭಾಗದ ವಕ್ತಾರೆ ನಬೀಲ ಮಸ್ರಾಲಿ ಹೇಳಿದ್ದಾರೆ.