ನೈಜೀರಿಯಾ: ಉಗ್ರರ ದಾಳಿಯಲ್ಲಿ ಕನಿಷ್ಠ 63 ಮಂದಿ ಮೃತ್ಯು

Photo: Reuters
ಅಬುಜಾ, ಸೆ.7: ಈಶಾನ್ಯ ನೈಜೀರಿಯಾದ ಗ್ರಾಮವೊಂದಕ್ಕೆ ನುಗ್ಗಿದ ಉಗ್ರರು ಕನಿಷ್ಠ 63 ಮಂದಿಯನ್ನು ಹತ್ಯೆಗೈದು ಪರಾರಿಯಾಗಿರುವುದಾಗಿ ಬೊರ್ನೊ ರಾಜ್ಯದ ಗವರ್ನರ್ ಬಬಗಾನ ಝುಲುಮ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ನೈಜೀರಿಯಾ-ಕ್ಯಾಮರೂನ್ ಗಡಿಭಾಗದ ಬಳಿಯಿರುವ, ನೈಜೀರಿಯಾದ ಮಿಲಿಟರಿ ನೆಲೆಯಿರುವ ದರೂಲ್ ಜಮಾಲ್ ನಗರಕ್ಕೆ ಮೋಟಾರ್ ಬೈಕ್ಗಳಲ್ಲಿ ಆಗಮಿಸಿದ ಉಗ್ರರು ಎದುರಿಗೆ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದು ಮನೆಗಳಿಗೆ ಬೆಂಕಿಯಿಟ್ಟಿದ್ದಾರೆ. ಮೃತರಲ್ಲಿ ಐವರು ಯೋಧರೂ ಸೇರಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಈಶಾನ್ಯ ನೈಜೀರಿಯಾದಲ್ಲಿ `ದಯೆಷ್ ವೆಸ್ಟ್ ಆಫ್ರಿಕನ್ ಪ್ರೊವಿನ್ಸ್'(ಡಿಡಬ್ಲ್ಯೂಎಪಿ) ಗುಂಪಿಗೆ ಸೇರಿದ ಉಗ್ರರು ಗ್ರಾಮೀಣ ಪ್ರದೇಶದಲ್ಲಿ ನಿರಂತರ ದಾಳಿ ನಡೆಸುತ್ತಿದ್ದಾರೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ದರೂರ್ ಜಮಾಲ್ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 30 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ವಾಯುಪಡೆಯ ಮೂಲಗಳು ಹೇಳಿವೆ.





