ನೈಜೀರಿಯಾದಲ್ಲಿ ಸೇನಾ ವಿಮಾನ ಪತನ
32 ಮಂದಿಯಿದ್ದ ವಿಮಾನದ ಅವಶೇಷ ನದಿಯ ಬಳಿ ಪತ್ತೆ

ಸಾಂದರ್ಭಿಕ ಚಿತ್ರ | Photo Credit : Pexels
ಲಾಗೋಸ್: 32 ಜನರನ್ನು ಹೊತ್ತೊಯ್ಯುತ್ತಿದ್ದ ನೈಜೀರಿಯಾ ವಾಯುಪಡೆಯ ವಿಮಾನ ಸೋಮವಾರ ನೈರುತ್ಯ ನೈಜೀರಿಯಾದ ಒಂಡೊ ರಾಜ್ಯದಲ್ಲಿ ಪತನಗೊಂಡಿದೆ.
ದಕ್ಷಿಣ ನೈಜೀರಿಯಾದ ಬೆನಿನ್ ನಗರದಿಂದ ಲಾಗೋಸ್ಗೆ ತನ್ನ ದೈನಂದಿನ ಕಾರ್ಯಾಚರಣೆಯಲ್ಲಿ ತೆರಳುತ್ತಿದ್ದ ವಿಮಾನವು ಒಂಡೊ ರಾಜ್ಯದ ಇಗ್ಬೊಕೋಡಾದಲ್ಲಿ ಪತನಗೊಂಡಿದೆ ಎಂದು ವಾಯುಪಡೆಯ ವಕ್ತಾರ ಎಹಿಮೆನ್ ಎಜೋಡಮೆ ತಿಳಿಸಿದ್ದಾರೆ.
ವಿಮಾನದಲ್ಲಿ 25 ಪ್ರಯಾಣಿಕರು ಹಾಗೂ ಏಳು ಮಂದಿ ವಿಮಾನ ಸಿಬ್ಬಂದಿ ಇದ್ದರು ಎಂದು ಸೇನಾ ಹಾಗೂ ವಿಮಾನಯಾನ ಸಚಿವ ಫೆಸ್ಟುಸ್ ಕೆಯಮೊ ಎಕ್ಸ್ನಲ್ಲಿ ತಿಳಿಸಿದ್ದಾರೆ.
ವಿಮಾನವು ನೌಕಾ ನೆಲೆಯ ಸಮೀಪ ಪತನಗೊಂಡಿದ್ದು, ಅದರ ಅವಶೇಷಗಳು ಪತ್ತೆಯಾಗಿವೆ. ಘಟನಾ ಸ್ಥಳದ ಸಮೀಪ ನದಿ ಇರುವ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ದೋಣಿಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಈ ನಡುವೆ, ನದಿಯ ಬಳಿ ಕೆಲವರು ಗುಂಪುಗೂಡಿರುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ಸಂಬಂಧಿತ ಪ್ರಾಧಿಕಾರಗಳು ಹಾಗೂ ತುರ್ತು ಸ್ಪಂದನಾ ಸಂಸ್ಥೆಗಳ ಸಮನ್ವಯದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ’ ಎಂದು ವಕ್ತಾರ ಎಹಿಮೆನ್ ಎಜೋಡಮೆ ತಿಳಿಸಿದ್ದಾರೆ.






