ಉಕ್ರೇನ್ ವಿಷಯದಲ್ಲಿ ರಾಜಿ ಇಲ್ಲ: ಪುಟಿನ್

ವ್ಲಾಡಿಮಿರ್ ಪುಟಿನ್ | Photo Credit : PTI
ಮಾಸ್ಕೊ, ನ.13: ರಶ್ಯ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮರುಪ್ರಾರಂಭಗೊಂಡ ರಾಜತಾಂತ್ರಿಕ ಮಾತುಕತೆಗಳ ಹೊರತಾಗಿಯೂ, ಭೂಪ್ರದೇಶಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಶಾಂತಿ ಒಪ್ಪಂದಕ್ಕೆ ಪ್ರಮುಖ ಅಡ್ಡಿಯಾಗಿಯೇ ಉಳಿದಿವೆ. ಪ್ರಾದೇಶಿಕ ಬೇಡಿಕೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರಾಕರಿಸಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
ಅಬುಧಾಬಿಯಲ್ಲಿ ರಶ್ಯ ಮತ್ತು ಉಕ್ರೇನ್ ಒಳಗೊಂಡಂತೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡು ದಿನಗಳ ಕಾಲ ನಡೆದ ತ್ರಿಪಕ್ಷೀಯ ಮಾತುಕತೆಗಳ ಬೆನ್ನಲ್ಲೇ, ಗುರುವಾರ ಮಾಸ್ಕೊದಲ್ಲಿ ಪುಟಿನ್ ಮತ್ತು ಅಮೆರಿಕದ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಹಾಗೂ ಜ್ಯಾರೆಡ್ ಕುಶ್ನರ್ ನಡುವೆ ಸಭೆ ನಡೆದಿದೆ.
ಉಕ್ರೇನ್ ನಿಂದ ತಾನು ವಶಪಡಿಸಿಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಪ್ರದೇಶಗಳ ಮೇಲಿನ ತನ್ನ ಬೇಡಿಕೆಗಳ ವಿಚಾರದಲ್ಲಿ ರಶ್ಯ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪುಟಿನ್ ಗುರುವಾರದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂಭಾವ್ಯ ಒಪ್ಪಂದದ ನಂತರ ಉಕ್ರೇನ್ ನಲ್ಲಿ ವಿದೇಶಿ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸುವುದನ್ನು ರಶ್ಯ ಅಧ್ಯಕ್ಷರು ತಳ್ಳಿಹಾಕಿದ್ದು, ಅಂತಹ ನಡೆಯನ್ನು 'ಯುದ್ಧದ ಮುಂದುವರಿಕೆ' ಎಂದು ಹೇಳಿದ್ದಾರೆ.
ಮಾನವೀಯ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ಸಲುವಾಗಿ ಪೂರ್ವ ಉಕ್ರೇನ್ ನ ಮುಂಚೂಣಿ ನಗರವಾದ ಕೊಸ್ಟಿಯಾಂಟಿನಿವ್ಕಾದಲ್ಲಿ ಜಂಟಿ ಮಾನವೀಯ ಕಾರ್ಯಾಚರಣೆ ನಡೆಸುವ ಪ್ರಸ್ತಾಪವನ್ನು ಪುಟಿನ್ ಮುಂದಿಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ರಶ್ಯ ಮತ್ತು ಉಕ್ರೇನ್ ಎರಡೂ ದೇಶಗಳು ಭಾಗವಹಿಸಬೇಕು ಎಂಬುದು ಅವರ ಪ್ರಸ್ತಾಪವಾಗಿದೆ. ನಗರವನ್ನು ವಶಪಡಿಸಿಕೊಂಡಿರುವುದಾಗಿ ರಶ್ಯ ಹೇಳಿಕೊಂಡಿದ್ದರೂ, ಅಲ್ಲಿ ತನ್ನ ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂಬುದು ಲಭ್ಯವಿರುವ ವರದಿಗಳಲ್ಲಿನ ಮಾಹಿತಿ.
ಶಾಂತಿ ಸ್ಥಾಪನೆಗೆ ಪ್ರತಿಯಾಗಿ ಪೂರ್ವ ಡೊನ್ಬಾಸ್ ಪ್ರದೇಶವನ್ನು ಸಂಪೂರ್ಣವಾಗಿ ಬಿಟ್ಟುಕೊಡಬೇಕೆಂಬ ಮಾಸ್ಕೋದ ಬೇಡಿಕೆಯನ್ನು ಉಕ್ರೇನ್ ತಿರಸ್ಕರಿಸಿದೆ. ಡೊನೆಟ್ಸ್ಕ್, ಖೆರ್ಸನ್, ಲುಗಾನ್ಸ್ಕ್ ಮತ್ತು ಝಪೊರಿಝಿಯಾ ಎಂಬ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಶ್ಯ ಅಧಿಕೃತವಾಗಿ ತನ್ನ ದೇಶಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಆದರೆ, ಈ ನಾಲ್ಕೂ ಪ್ರದೇಶಗಳ ಮೇಲೆ ರಶ್ಯ ಸಂಪೂರ್ಣ ನಿಯಂತ್ರಣ ಹೊಂದಿಲ್ಲ. ಈ ಸೇರ್ಪಡೆಗಳನ್ನು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ತಿರಸ್ಕರಿಸಿವೆ.
ಅಬುಧಾಬಿ ಮಾತುಕತೆಗಳಲ್ಲಿ ಯುದ್ಧ ಕೈದಿಗಳ ದೊಡ್ಡ ವಿನಿಮಯಕ್ಕೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿದ್ದರೂ, ಪ್ರಾದೇಶಿಕ ಬೇಡಿಕೆ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಮಾಸ್ಕೊದಲ್ಲಿ ನಡೆದ ಸಭೆಯ ಬಳಿಕ ಮತ್ತೊಂದು ಸುತ್ತಿನ ತ್ರಿಪಕ್ಷೀಯ ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ವಿಟ್ಕಾಫ್ ತಿಳಿಸಿದ್ದಾರೆ.






