ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ : ಕೆನಡಾ ಪೊಲೀಸರ ಹೇಳಿಕೆ

ಹರ್ದೀಪ್ ಸಿಂಗ್ ನಿಜ್ಜರ್ | Photo Credit : thehindu.com
ಒಟ್ಟಾವ, ಜು.8: ಕೆನಡಾದಲ್ಲಿ 2023ರಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ, ಈ ಕೊಲೆಯಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಕೆನಡಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮಾಡಿದ್ದ ಆರೋಪಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಟ್ರುಡೊ ಅವರ ಆ ಆರೋಪಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ತೀವ್ರವಾಗಿ ಹದಗೆಡಲು ಕಾರಣವಾಗಿದ್ದವು.
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರ ಸತೀಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನಿಜ್ಜರ್ ಹತ್ಯೆಗೆ ಆದೇಶ ನೀಡಿದ್ದರು ಎಂದು ಅಮೆರಿಕದ ಅಧಿಕಾರಿಗಳು ಆರೋಪ ಹೊರಿಸಿದ ಕೆಲವೇ ಗಂಟೆಗಳಲ್ಲಿ, ಕೆನಡಾ ಪೊಲೀಸ್ ಡೆಪ್ಯುಟಿ ಕಮಿಷನರ್ ಲಿಸಾ ಮೋಲ್ರ್ಯಾಂಡ್ ಈ ಹೇಳಿಕೆ ನೀಡಿದ್ದಾರೆ.
ತನಿಖೆಯ ವಿವರಗಳನ್ನು ಹಂಚಿಕೊಂಡ ಮೋಲ್ಯಾರ್ಂಡ್, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿರುವುದಕ್ಕೆ ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಭಾರತ ಸರಕಾರವು ತನಿಖೆಗೆ ಸಂಪೂರ್ಣ ಸಹಕಾರ ನೀಡಿದೆ ಎಂದು ತಿಳಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ನಡೆದ ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಕೊಲೆಯಲ್ಲಿ ಭಾರತ ಸರ್ಕಾರದ ನಂಟಿದೆ ಎಂದು ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಸಂಚಲನಾತ್ಮಕ ಆರೋಪ ಮಾಡಿದ್ದರು.






