ಇರಾನ್ ವಿರುದ್ಧ ಇನ್ನು ದೊಡ್ಡ ಮಿಲಿಟರಿ ಕಾರ್ಯಾಚರಣೆಯ ಅಗತ್ಯವಿಲ್ಲ: ರೂಬಿಯೊ

ಮಾರ್ಕೊ ರೂಬಿಯೊ | Photo Credit :AP
ವಾಶಿಂಗ್ಟನ್, ನ. 11: ಇರಾನ್ ವಿರುದ್ಧ ಇನ್ನು ಮುಂದೆ ದೊಡ್ಡ ಮಟ್ಟದದ ಮಿಲಿಟರಿ ಕಾರ್ಯಾಚರಣೆಗಳ ಅಗತ್ಯವಿಲ್ಲ. ಆರ್ಥಿಕ ನಿರ್ಬಂಧಗಳು ಹಾಗೂ ಹೆಚ್ಚುತ್ತಿರುವ ಒತ್ತಡವು ಇರಾನ್ ಆರ್ಥಿಕತೆಗೆ ತೀವ್ರ ಹಾನಿ ಉಂಟುಮಾಡುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಇದು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
‘ಆರ್ಥಿಕ ಒತ್ತಡವು ಇನ್ನಷ್ಟು ಭೀಕರವಾಗಲಿದೆ. ಈ ನಿರ್ಬಂಧಗಳು ಒಂದಕ್ಕೊಂದು ಜೋಡಣೆಯಾಗಿ ಪ್ರಭಾವ ಬೀರುತ್ತವೆ ಎಂಬುದು ನನಗೆ ಖಚಿತವಾಗಿದೆ. ತಾತ್ಕಾಲಿಕ ಕದನ ವಿರಾಮದ ಸಮಯದಲ್ಲಿ ನಿರ್ಬಂಧಗಳನ್ನು ತಪ್ಪಿಸಿ ಸರಬರಾಜಾಗಿದ್ದ ಅಲ್ಪ ಪ್ರಮಾಣದ ತೈಲ ಖಾಲಿಯಾದ ತಕ್ಷಣ, ಇರಾನ್ ನ ತೈಲ ಆದಾಯವು ಸಂಪೂರ್ಣವಾಗಿ ಕ್ಷೀಣಿಸಲಿದೆ. ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಇರಾನ್ ಇನ್ನೂ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಮೆರಿಕದ ಖಜಾನೆ ಇಲಾಖೆಯು ನಮ್ಮ ಗುಪ್ತಚರ ಸಂಸ್ಥೆಗಳು ಹಾಗೂ ಇತರರೊಂದಿಗೆ ಸೇರಿ ಆ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತಿದೆ’ ಎಂದು ರೂಬಿಯೊ ಹೇಳಿದರು.
ಆರ್ಥಿಕ ನಿರ್ಬಂಧಗಳ ಜೊತೆಗೆ ನೌಕಾ ದಿಗ್ಬಂಧನವೂ ಇರಾನ್ ನ ಆರ್ಥಿಕ ಚಟುವಟಿಕೆಗಳ ಮೇಲೆ ಒತ್ತಡ ಹೇರುತ್ತಿದೆ.
‘ಇರಾನ್ ಜೊತೆ ರಾಜತಾಂತ್ರಿಕ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಎಂದಿಗೂ ಸಿದ್ಧವಿದೆ. ಇರಾನ್ ಕೂಡ ಒಪ್ಪಂದವನ್ನು ಬಯಸುತ್ತದೆ ಎಂದೇ ನಾನು ಭಾವಿಸುತ್ತೇನೆ. ಆದರೆ ಅವರು ವಿಧಿಸುತ್ತಿರುವ ಷರತ್ತುಗಳು ತೀರಾ ಹಾಸ್ಯಾಸ್ಪದವಾಗಿವೆ. ಅವರು ಸದ್ಯಕ್ಕೆ ಗಂಭೀರವಾಗಿ ಯೋಚಿಸುತ್ತಿಲ್ಲ. ಒಂದು ವೇಳೆ ನೈಜ ಹಾಗೂ ಸರಿಯಾದ ಒಪ್ಪಂದ ಸಾಧ್ಯವಾಗುವುದಾದರೆ, ನಾವು ಅದಕ್ಕೆ ಮುಕ್ತವಾಗಿದ್ದೇವೆ’ ಎಂದು ರೂಬಿಯೊ ಹೇಳಿದರು.






