ಇರಾನ್ ವಿರುದ್ಧದ ಯುದ್ಧ ಅಂತ್ಯಕ್ಕೆ ಚೀನಾ, ರಷ್ಯಾದ ನೆರವು ಬೇಕಿಲ್ಲ: ಟ್ರಂಪ್
ಇರಾನ್ ನ ಕ್ಷಿಪಣಿ ಸಾಮರ್ಥ್ಯ ಶೇ. 12-13ಕ್ಕೆ ಕುಸಿದಿದೆ ಎಂದ ಅಮೆರಿಕ ಅಧ್ಯಕ್ಷ

Photo :PTI
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕಕ್ಕೆ ಚೀನಾ ಅಥವಾ ರಷ್ಯಾದ ನೆರವಿನ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ನ ಮಿಲಿಟರಿ ಸಾಮರ್ಥ್ಯಗಳು ತೀವ್ರವಾಗಿ ದುರ್ಬಲಗೊಂಡಿದ್ದು, ಅಲ್ಲಿನ ಅಧಿಕಾರಿಗಳು ಒಪ್ಪಂದಕ್ಕೆ ಬರಲು ಬಯಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಯುದ್ಧವನ್ನು ಅಂತ್ಯಗೊಳಿಸಲು ಚೀನಾ ಮತ್ತು ರಷ್ಯಾದ ನೆರವು ಕೋರುವಿರಾ ಎಂದು 'ಫಾಕ್ಸ್ ನ್ಯೂಸ್' ಪ್ರಶ್ನಿಸಿದಾಗ, "ನಮಗೆ ಯಾವುದೇ ನೆರವಿನ ಅಗತ್ಯವಿಲ್ಲ" ಎಂದು ಟ್ರಂಪ್ ಉತ್ತರಿಸಿದ್ದಾರೆ.
ಇರಾನ್ ನ ನೌಕಾಪಡೆ, ವಾಯುಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಮೆರಿಕದ ಪಡೆಗಳು ಸೋಲಿಸಿವೆ. ಅಲ್ಲದೆ, ಇರಾನ್ ನ ಕ್ಷಿಪಣಿ ಸಾಮರ್ಥ್ಯವು ಯುದ್ಧಕ್ಕೂ ಮುನ್ನ ಇದ್ದ ಸಾಮರ್ಥ್ಯದ ಶೇ. 12ರಿಂದ 13ಕ್ಕೆ ಇಳಿದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಆದರೆ, ಇರಾನ್ ನ ಬಳಿ ಇನ್ನೂ ಗಮನಾರ್ಹ ಸಂಖ್ಯೆಯ ಕ್ಷಿಪಣಿಗಳಿವೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ತಿಳಿಸಿದೆ. ನ. 15ರಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟಿಸಿದ ವರದಿಯ ಪ್ರಕಾರ, ಇರಾನ್ ನ ಕ್ಷಿಪಣಿ ಉತ್ಪಾದನಾ ಘಟಕಗಳಿಗೆ ವ್ಯಾಪಕ ಹಾನಿಯಾಗಿದ್ದರೂ ಆ ದೇಶದ ಬಳಿ ಇನ್ನೂ ಅಂದಾಜು 1,500ರಿಂದ 2,500 ಕ್ಷಿಪಣಿಗಳಿವೆ.
ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕಕ್ಕೆ "ಸಂಪೂರ್ಣ ನಿಯಂತ್ರಣ"ವಿದೆ ಎಂದು ಟ್ರಂಪ್ ಹೇಳಿದ್ದಾರೆ. ಕಳೆದ ವಾರ ಈ ಜಲಮಾರ್ಗದ ಮೂಲಕ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣದ ತೈಲ ಸಾಗಣೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಚೀನಾ ಮತ್ತು ರಷ್ಯಾ ಈ ಸಂಘರ್ಷದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡುವುದರಿಂದ ದೂರ ಉಳಿದಿವೆ ಎಂದು ಹೇಳಿರುವ ಟ್ರಂಪ್, ಟೆಹ್ರಾನ್ ನೊಂದಿಗಿನ ಮಾತುಕತೆಗಳಲ್ಲಿ ಈ ಎರಡೂ ದೇಶಗಳ ನೆರವು ಕೋರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.






