ಹಾರ್ಮುಝ್ನಲ್ಲಿ ನೌಕಾಯಾನ ತೆರಿಗೆ, ಟೋಲ್ ವಿಧಿಸುತ್ತಿಲ್ಲ: ಇರಾನ್ ಸ್ಪಷ್ಟನೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಮೇ 25: ಆಯಕಟ್ಟಿನ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವಾಗ ನೌಕಾಯಾನ ಸೇವೆಗಳಿಗಾಗಿ ಹಡಗುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಯಾವುದೇ ಟೋಲ್ಗಳನ್ನು ವಿಧಿಸುವುದಿಲ್ಲ ಎಂದು ಇರಾನ್ ಸೋಮವಾರ ಸ್ಪಷ್ಟಪಡಿಸಿದೆ.
ಈ ಪ್ರದೇಶದಲ್ಲಿ ಒದಗಿಸುವ ಸಮುದ್ರ ಮತ್ತು ಪರಿಸರ ಸೇವೆಗಳಿಗೆ ಶುಲ್ಕಗಳನ್ನು ವಿಧಿಸುತ್ತಿದ್ದೇವೆ. ಹಾರ್ಮುಝ್ ಜಲಸಂಧಿ, ಪರ್ಷಿಯನ್ ಗಲ್ಫ್ ಮತ್ತು ಓಮನ್ ಸಮುದ್ರದ ಪರಿಸರವನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳ ಜೊತೆಗೆ ಇತರ ಸೇವೆಗಳಿಗೆ ಕೆಲವು ಶುಲ್ಕಗಳ ಸಂಗ್ರಹ ಅಗತ್ಯವಿರುತ್ತದೆ ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಖೈ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಕಡಲ ವ್ಯಾಪಾರದಲ್ಲಿ ಅಡಚಣೆಗಳ ಮಧ್ಯೆ, ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಕೆಲವು ವಾಣಿಜ್ಯ ಹಡಗುಗಳಿಂದ ಪಾವತಿಗಳನ್ನು ಪಡೆಯಲು ಪ್ರಾರಂಭಿಸಿದೆ. ಇರಾನ್ ದ್ವೀಪದ ಚೆಕ್ಪೋಸ್ಟ್ಗಳು, ಕಟ್ಟುನಿಟ್ಟಾದ ಮಿಲಿಟರಿ ತಪಾಸಣೆ ಮತ್ತು ನಿಯಂತ್ರಿಕ ಹಡಗು ಮಾರ್ಗಗಳ ಮೂಲಕ ಆಯಕಟ್ಟಿನ ಜಲಮಾರ್ಗದ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದೆ ಎಂಬ ವರದಿಯ ಬಗ್ಗೆ ಅವರು ಪ್ರತಿಕ್ರಿಯಿಸಿದರು.




