ಹಂಗೇರಿ ಲೇಖಕ ಲಾಸ್ಲೋ ಕ್ರಾಸ್ನಹೊರ್ಕಾಯ್ಗೆ ಸಾಹಿತ್ಯದ ನೊಬೆಲ್

PC : thehindu.com
ಸ್ಟಾಕ್ಹೋಮ್, ಅ. 9: ಹಂಗೇರಿ ಲೇಖಕ ಲಾಸ್ಲೋ ಕ್ರಾಸ್ನಹೊರ್ಕಾಯ್ ಅವರಿಗೆ ಗುರುವಾರ 2025ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಳಯಕಾರಿ ಭಯಾನಕತೆಗಳ ನಡುವೆಯೂ ಕಲೆಯ ಶಕ್ತಿಯನ್ನು ಮರುದೃಢೀಕರಿಸುವ ಅವರ ಪ್ರಭಾವಿ ಹಾಗೂ ದಾರ್ಶನಿಕ ಕೃತಿಗಳಿಗೆ ಅತ್ಯುನ್ನತ ಜಾಗತಿಕ ಪ್ರಶಸ್ತಿಯನ್ನು ನೀಡಲಾಗಿದೆ.
ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸಯನ್ಸಸ್ ಗುರುವಾರ ಪ್ರಶಸ್ತಿಯನ್ನು ಘೋಷಿಸಿದೆ.
1954ರಲ್ಲಿ ರೊಮೇನಿಯ ಗಡಿ ಸಮೀಪದ ಪಟ್ಟಣವೊಂದರಲ್ಲಿ ಜನಿಸಿದ ಕ್ರಾಸ್ನಹೊರ್ಕಾಯ್, ತನ್ನ ಪ್ರಥಮ ಕಾದಂಬರಿ ‘ಸಟನ್ಟಾಂಗೊ’ವನ್ನು 1985ರಲ್ಲಿ ಪ್ರಕಟಿಸಿದರು. ಆ ಮೂಲಕ ಅವರು ಹಂಗೇರಿಯಲ್ಲಿ ಸಾಹಿತ್ಯಲೋಕದ ಮಿಂಚಾದರು. ಈ ವರ್ಷ (2025) ಪ್ರಕಟಗೊಂಡ ಅವರ ಕಾದಂಬರಿ ‘ಹರ್ಶ್ಟ್ 07769’ನ್ನು ಶ್ರೇಷ್ಠ ಸಮಕಾಲೀನ ಜರ್ಮನ್ ಕಾದಂಬರಿ ಎಂಬುದಾಗಿ ಬಣ್ಣಿಸಲಾಗಿದೆ. ದೇಶದ ಸಾಮಾಜಿಕ ಅಶಾಂತಿಯನ್ನು ಅವರು ಈ ಕಾದಂಬರಿಯಲ್ಲಿ ಅತ್ಯಂತ ನಿಖರವಾಗಿ ಬಿಂಬಿಸಿದ್ದಾರೆ ಎಂದು ಹೇಳಲಾಗಿದೆ.
ಅವರ ಇತರ ಪ್ರಮುಖ ಕೃತಿಗಳೆಂದರೆ: 2003ರ ಕಾದಂಬರಿ ‘ಎಸಾಕ್ರೋಲ್ ಹೆಗಿ, ಡೆಲ್ರೋಲ್ ಟು, ನ್ಯುಗಟ್ರೋಲ್ ಉಟಕ್, ಕೆಲೆಟ್ರೋಲ್ ಫೋಲ್ಯೊ’ (ಇದರ 2022ರ ಇಂಗ್ಲಿಷ್ ಅನುವಾದ: ‘ಅ ಮೌಂಟನ್ ಟು ದ ನಾರ್ತ್, ಅ ಲೇಕ್ ಟು ದ ಸೌತ್, ಪಾತ್ಸ್ ಟು ದ ವೆಸ್ಟ್, ಅ ರಿವರ್ ಟು ದ ಈಸ್ಟ್’); ಮತ್ತು 2008ರ ಕಥಾ ಸಂಕಲನ ‘ಸೆಯೊಬೊ ಜಾರ್ಟ್ ಒಡಲೆಂಟ್ (ಇದರ 2013ರ ಇಂಗ್ಲಿಷ್ ಅನುವಾದ: ‘ಸೆಯೊಬೊ ದೇರ್ ಬಿಲೋ).
‘ಸೆಯೊಬೊ ದೇರ್ ಬಿಲೋ’ 17 ಕತೆಗಳ ಸಂಕಲನವಾಗಿದ್ದು, ಅಂಧ ಮತ್ತು ನಶ್ವರ ಜಗತ್ತಿನಲ್ಲಿ ಸೌಂದರ್ಯ ಮತ್ತು ಕಲೆಯ ಪಾತ್ರಗಳನ್ನು ವಿವರಿಸುತ್ತದೆ.
‘ಹರ್ಶ್ಟ್ 07769’ರಲ್ಲಿ, ಜರ್ಮನಿಯ ತೂರಿಂಜನ್ ಎಂಬ ಸಣ್ಣ ಸಮಕಾಲೀನ ಪಟ್ಟಣದ ನೈಜ ಚಿತ್ರಣವನ್ನು ನೀಡಲಾಗಿದೆ. ಈ ಪಟ್ಟಣವು ಸಾಮಾಜಿಕ ಅಶಾಂತಿ, ಕೊಲೆ ಮತ್ತು ಬೆಂಕಿಹಚ್ಚುವ ಘಟನೆಗಳಿಗೆ ಸಾಕ್ಷಿಯಾಗಿತ್ತು. ಜೊಹಾನ್ ಸೆಬಾಸ್ಟಿಯನ್ ಬಾಕ್ರ ಪ್ರಭಾವಿ ಪರಂಪರೆಯ ಬಳಿಕ, ಪಟ್ಟಣದಲ್ಲಿ ನಡೆದ ಹಿಂಸಾಚಾರವನ್ನು ಈ ಕಾದಂಬರಿ ಬಿಂಬಿಸಿದೆ. ‘‘ಹಿಂಸೆ ಮತ್ತು ಸೌಂದರ್ಯ ಅಸಹಜವಾಗಿ ಸಮ್ಮಿಳಿತಗೊಂಡ ಬಗ್ಗೆ ಒಂದೇ ಉಸರಿನಲ್ಲಿ ಬರೆದ ಪುಸ್ತಕ ಇದಾಗಿದೆ’’ ಎಂದು ನೊಬೆಲ್ ಸಮಿತಿಯ ಹೇಳಿಕೆಯೊಂದು ತಿಳಿಸಿದೆ.
ಕಳೆದ ಬಾರಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ದಕ್ಷಿಣ ಕೊರಿಯದ ಲೇಖಕ ಹಾನ್ ಕಾಂಗ್ರಿಗೆ ನೀಡಲಾಗಿತ್ತು.
ಪ್ರಶಸ್ತಿಯನ್ನು ಡಿಸೆಂಬರ್ 10ರಂದು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1.2 ಮಿಲಿಯ ಡಾಲರ್ (ಸುಮಾರು 10.65 ಕೋಟಿ ರೂಪಾಯಿ) ನಗದನ್ನು ಒಳಗೊಂಡಿದೆ.







