SIR ವಿರುದ್ಧ ಬ್ರಿಟನ್ ನಲ್ಲಿ ಅನಿವಾಸಿಗಳ ಪ್ರತಿಭಟನೆ

Photo Credit : PTI
ಹೊಸದಿಲ್ಲಿ, ಅ. 14: ಭಾರತದಲ್ಲಿ SIR ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ, ಬ್ರಿಟನ್ನಲ್ಲಿರುವ ಹಲವು ಅನಿವಾಸಿ ಭಾರತೀಯ ಸಂಘಟನೆಗಳು ಮಂಗಳವಾರ ಸಂಜೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದವು.
ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್, ಹಿಂದುತ್ವವಾದದ ವಿರುದ್ಧ ಕೇಂಬ್ರಿಜ್ನ ದಕ್ಷಿಣ ಏಷ್ಯಾ ವೇದಿಕೆ, ಭಾರತೀಯ ಕಾರ್ಮಿಕ ಸಂಘ ಹಾಗೂ ಎಸ್ಓಎಎಸ್ ಅಂಬೇಡ್ಕರ್ ಸೊಸೈಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಪ್ರಜೆಗಳ ಮತದಾನದ ಹಕ್ಕು ಹಾಗೂ ಪ್ರತಿಭಟನೆಯ ಹಕ್ಕನ್ನು ಬೆಂಬಲಿಸಿ ನಡೆದ ಈ ಪ್ರದರ್ಶನದಲ್ಲಿ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ ಗಣನೀಯ ಸಂಖ್ಯೆಯ ಭಾರತೀಯರು ಭಾಗವಹಿಸಿದ್ದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. SIR ಪ್ರಕ್ರಿಯೆಯು ಅಕ್ರಮಗಳಿಂದ ಕೂಡಿದ್ದು, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ದಕ್ಷಿಣ ಏಷ್ಯಾ ಸಾಲಿಡಾರಿಟಿ ಗ್ರೂಪ್ ನ ಮುಕ್ತಿ ಶಾ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಚಳವಳಿಯು ಸರ್ವಾಧಿಕಾರವಾದವನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಿಸಿದೆ ಎಂದು ಹೇಳಿದ್ದಾರೆ. ಭಾರತದ ಹಾಲಿ ಸರಕಾರವು ಬ್ರಿಟನ್ ನಲ್ಲಿ ಹೆಚ್ಚು ಸಕ್ರಿಯವಾಗುತ್ತಿರುವ ಜಾಗತಿಕ ಕಟ್ಟರ್ ಬಲಪಂಥೀಯ ಚಳವಳಿಯ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಈ ಪ್ರತಿಭಟನೆ ಹೆಚ್ಚಿನ ಮಹತ್ವ ಪಡೆದಿದೆ ಎಂದು ಶಾ ಹೇಳಿದರು.
ಸಭೆಯಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ನಾಯಕರು ಮಾತನಾಡಿ, ಭಾರತ ಸರಕಾರದಿಂದ ದಮನಕ್ಕೊಳಗಾಗುತ್ತಿರುವ ಭಾರತೀಯ ವಿದ್ಯಾರ್ಥಿ ಹೋರಾಟಗಾರರ ಜೊತೆ ದೃಢವಾಗಿ ನಿಲ್ಲುವಂತೆ ಅನಿವಾಸಿ ಭಾರತೀಯರನ್ನು ಆಗ್ರಹಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವ ಹಾಗೂ ದಿಲ್ಲಿಯಲ್ಲಿ ಪ್ರತಿಭಟನಕಾರರ ಮೇಲೆ ನಡೆದಿದೆಯೆನ್ನಲಾದ ಪೊಲೀಸ್ ದೌರ್ಜನ್ಯ ಮತ್ತು ಲೈಂಗಿಕ ಹಿಂಸಾಚಾರವನ್ನು ಖಂಡಿಸುವ ಘೋಷಣೆಗಳ ಫಲಕಗಳನ್ನು ಸಭೆಯಲ್ಲಿ ಪಾಲ್ಗೊಂಡವರು ಪ್ರದರ್ಶಿಸಿದರು.






