ಕ್ಲಸ್ಟರ್ ಬಾಂಬ್ ಸಿಡಿತಲೆ ಪರೀಕ್ಷಿಸಿದ ಉತ್ತರ ಕೊರಿಯಾ

Photo Credit : X
ಪ್ಯೋಂಗ್ಯಾಂಗ್, ನ.1: ಯುದ್ಧ ಸಿದ್ಧತೆ ಹಾಗೂ ಕ್ಲಸ್ಟರ್ ಬಾಂಬ್ ಸಿಡಿತಲೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಉತ್ತರ ಕೊರಿಯಾ ಶನಿವಾರ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಅಳವಡಿಸಲು ವಿನ್ಯಾಸಗೊಳಿಸಲಾದ ಕ್ಲಸ್ಟರ್ ಬಾಂಬ್ ಸಿಡಿತಲೆಯನ್ನು ಪರೀಕ್ಷಿಸಿದೆ ಎಂದು ವರದಿಯಾಗಿದೆ.
ದಾಳಿ ಡ್ರೋನ್ಗಳು, ಹೊಸ ನಿಖರ ಮಾರ್ಗದರ್ಶಿತ ಟಾರ್ಪಿಡೊ ವ್ಯವಸ್ಥೆ ಹಾಗೂ ಮಧ್ಯಮ ಶ್ರೇಣಿಯ ಹೈಪರ್ಸಾನಿಕ್ ಕ್ಷಿಪಣಿ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ಇತ್ತೀಚೆಗೆ ಪರೀಕ್ಷಿಸಿತ್ತು. ಇದರ ಬೆನ್ನಲ್ಲೇ ಈ ಪರೀಕ್ಷೆ ನಡೆದಿದೆ.
ಕ್ಲಸ್ಟರ್ ಬಾಂಬ್ ಗಳು ಸಾಮಾನ್ಯವಾಗಿ ಹತ್ತಾರು ಅಥವಾ ನೂರಾರು ಸಣ್ಣ ಸ್ಫೋಟಕ ಉಪಸಿಡಿತಲೆಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದ ವಿಶಾಲ ಪ್ರದೇಶದಲ್ಲಿ ಏಕಕಾಲಕ್ಕೆ ಹಲವು ನೆಲೆಗಳ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತದೆ.
ಅತ್ಯಂತ ಹೆಚ್ಚಿನ ಸಾಂದ್ರತೆಯ ಸ್ಫೋಟಕ ಶಕ್ತಿಯೊಂದಿಗೆ 12ರಿಂದ 13 ಹೆಕ್ಟೇರ್ ವಿಸ್ತೀರ್ಣದ ಗುರಿ ಪ್ರದೇಶವನ್ನು ಸುಟ್ಟುಹಾಕುವ ಸಾಮರ್ಥ್ಯ ಈ ಬಾಂಬ್ ಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಉತ್ತರ ಕೊರಿಯಾದ KCNA ಸುದ್ದಿಸಂಸ್ಥೆ ವರದಿ ಮಾಡಿದೆ.




