ಗಾಝಾದ ಎರಡು ಆಸ್ಪತ್ರೆಗಳನ್ನು ಸುತ್ತುವರಿದ ಇಸ್ರೇಲ್ ಪಡೆಗಳು; ಆರೋಗ್ಯ ವ್ಯವಸ್ಥೆಯ ಮೇಲಿನ ದಾಳಿಗೆ ವಿಶ್ವಸಂಸ್ಥೆ ಕಳವಳ

ಸಾಂದರ್ಭಿಕ ಚಿತ್ರ | PC : NDTV
ಗಾಝಾ: ಉತ್ತರ ಗಾಝಾದಲ್ಲಿ ಕಾರ್ಯಾಚರಿಸುತ್ತಿರುವ ಎರಡು ಆಸ್ಪತ್ರೆಗಳನ್ನು ಇಸ್ರೇಲಿ ಪಡೆಗಳು ಸುತ್ತುವರಿದಿದ್ದು ಆಸ್ಪತ್ರೆಯ ಒಳಗೆ ಅಥವಾ ಹೊರಗೆ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ನೆರವು ಏಜೆನ್ಸಿಗಳು ಹೇಳಿವೆ.
ಇಂಡೊನೇಶ್ಯನ್ ಆಸ್ಪತ್ರೆ ಮತ್ತು ಅಲ್-ಅವಾಡಾ ಆಸ್ಪತ್ರೆಗಳು ಮಾತ್ರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎರಡೂ ಆಸ್ಪತ್ರೆಗಳು ಈ ವಾರ ದಾಳಿಗೊಳಗಾಗಿದ್ದು ಅಲ್-ಅವಾಡಾದ ಮೇಲೆ ಬುಧವಾರ ಶೆಲ್ ದಾಳಿ ನಡೆದಿದೆ ಎಂದು ಆಸ್ಪತ್ರೆಯ ನಿರ್ದೇಶಕರನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಮೂರನೇ ಆಸ್ಪತ್ರೆಯಾಗಿರುವ ಕಮಲ್ ಅಡ್ವಾನ್ ಆಸ್ಪತ್ರೆಯ ಸುತ್ತಮುತ್ತ ಇಸ್ರೇಲ್ ಪಡೆಗಳು ನಿಯೋಜನೆಗೊಂಡಿದ್ದು ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. ಉತ್ತರ ಗಾಝಾದ ಹೆಚ್ಚಿನ ಭಾಗಗಳ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಅಧಿಕಾರಿಗಳು ಮಂಗಳವಾರ ಮತ್ತೊಮ್ಮೆ ಆದೇಶಿಸಿದ್ದಾರೆ. ಈ ಮೂರೂ ಆಸ್ಪತ್ರೆಗಳು ಸ್ಥಳಾಂತರಿಸುವ ವಲಯದಲ್ಲಿದೆ. ಮತ್ತೆ ಎರಡು ಆಸ್ಪತ್ರೆಗಳು ಹಾಗೂ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಳಾಂತರಿಸುವ ವಲಯದ 1,000 ಮೀಟರ್ ಒಳಗಿದೆ. ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು ಹಾಗೂ ಸ್ಥಳಾಂತರಿಸುವ ಆದೇಶಗಳು ಆರೋಗ್ಯ ವ್ಯವಸ್ಥೆಯನ್ನು ಬ್ರೇಕಿಂಗ್ ಪಾಯಿಂಟ್ ಮೀರಿ ವಿಸ್ತರಿಸುತ್ತಿವೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.
ನಿರಂತರ ಬಾಂಬ್ ದಾಳಿ, ಹೆಚ್ಚುತ್ತಿರುವ ಅಪೌಷ್ಟಿಕತೆಯ ಪ್ರಮಾಣ, ವೈದ್ಯಕೀಯ ಸರಬರಾಜು ಕ್ಷೀಣಿಸುತ್ತಿರುವ ನಡುವೆಯೇ 2 ದಶಲಕ್ಷಕ್ಕೂ ಅಧಿಕ ಜನರಿರುವ ಗಾಝಾ ಪ್ರದೇಶದ 36 ಆಸ್ಪತ್ರೆಗಳಲ್ಲಿ ಕೇವಲ 20 ಮಾತ್ರ ಭಾಗಶಃ ಕಾರ್ಯನಿರ್ವಹಿಸುತ್ತಿವೆ. ಉತ್ತರ ಗಾಝಾದ ಆಸ್ಪತ್ರೆಗಳು ಸಂಪೂರ್ಣ ಬಾಗಿಲು ಮುಚ್ಚುವ ಗಂಭೀರ ಅಪಾಯವಿದೆ. ಗಾಝಾದಲ್ಲಿ ಸುಮಾರು 19 ತಿಂಗಳುಗಳಿಂದ ನಡೆಯುತ್ತಿರುವ ಹಮಾಸ್ ವಿರುದ್ಧದ ಯುದ್ಧದಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಗಳ ಮೇಲೆ 700ಕ್ಕೂ ಅಧಿಕ ದಾಳಿ ನಡೆದಿರುವುದನ್ನು ದಾಖಲಿಸಿಕೊಂಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆರೋಗ್ಯ ಕೇಂದ್ರಗಳನ್ನು ಹಮಾಸ್ ಗುಂಪು ಕಮಾಂಡ್ ಕೇಂದ್ರಗಳನ್ನಾಗಿ ಬಳಸುತ್ತಿದೆ ಎಂದು ಇಸ್ರೇಲ್ ಸೇನೆ ಆರೋಪಿಸುತ್ತಿದೆ. ಉತ್ತರ ಗಾಝಾದಲ್ಲಿ ಆಸ್ಪತ್ರೆಗಳ ಮೇಲಿನ ದಾಳಿಯು ಜನಸಂಖ್ಯೆಯನ್ನು ದಕ್ಷಿಣಕ್ಕೆ ಮತ್ತು ಅಂತಿಮವಾಗಿ ಗಾಝಾದಿಂದ ಹೊರಗೆ ಸ್ಥಳಾಂತರಿಸುವ ಯೋಜನೆಯ ಭಾಗವಾಗಿದೆ ಎಂದು ಫೆಲೆಸ್ತೀನೀಯರು ಹೇಳುತ್ತಿದ್ದಾರೆ. `ಆಸ್ಪತ್ರೆಗಳನ್ನು ಕಾರ್ಯಾಚರಣೆಯಿಂದ ಹೊರಗೆ ಇರಿಸುವ ಮೂಲಕ ಗಾಝಾದಿಂದ ಜನರನ್ನು ಬಲವಂತವಾಗಿ ಸ್ಥಳಾಂತರಿಸಲು ಇಸ್ರೇಲ್ ಬಯಸಿದೆ' ಎಂದು ಅಲ್-ಅವಾಡ ಆಸ್ಪತ್ರೆಯ ಆಡಳಿತ ಮಂಡಳಿಯ ವಕ್ತಾರರು ಆರೋಪಿಸಿದ್ದಾರೆ.
---------







