Norway: ಡ್ರೋನ್ ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಉಕ್ರೇನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ವಿಮಾನ

Photo: x.com/front_ukrainian
ಓಸ್ಲೋ: ನಾರ್ವೆ ರಾಜ ಹರಾಲ್ಡ್ V ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಓಸ್ಲೋಗೆ ತೆರಳುತ್ತಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನವು ಮಾಲ್ಡೋವಾದಿಂದ ಟೇಕ್ಆಫ್ ಆಗುತ್ತಿದ್ದ ವೇಳೆ ಅಪರಿಚಿತ ಡ್ರೋನ್ ಒಂದಕ್ಕೆ ಡಿಕ್ಕಿಯಾಗುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ ಎಂದು NRK ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ನಾರ್ವೆಯ ಸಾರ್ವಜನಿಕ ಪ್ರಸಾರಕ ಸಂಸ್ಥೆ NRK ಜೊತೆ ಮಾತನಾಡಿದ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಘಟನೆಯನ್ನು ದೃಢಪಡಿಸಿದ್ದಾರೆ.
ಈ ಘಟನೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಎದುರಿಸುತ್ತಿರುವ ಭದ್ರತಾ ಅಪಾಯಗಳ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಸ್ಟೋರ್ ಹೇಳಿದ್ದಾರೆ.
ಮಾಲ್ಡೋವಾದಿಂದ ಹೊರಟ ಝೆಲೆನ್ಸ್ಕಿ ಮಂಗಳವಾರ ಸಂಜೆ ಓಸ್ಲೋ ತಲುಪಿದರು. ಅಲ್ಲಿ ಅವರು ವಿಶ್ವ ನಾಯಕರು ಹಾಗೂ ಗಣ್ಯರೊಂದಿಗೆ ರಾಜ ಹೆರಾಲ್ಡ್ V ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ನಾರ್ವೆ ಪ್ರಧಾನಿ ಕಚೇರಿಯ ರಾಜ್ಯ ಕಾರ್ಯದರ್ಶಿ ಭಾನುಜಾ ರಸಿಯಾ ಮಾತನಾಡಿ, "ಮಾಲ್ಡೋವಾ ವಾಯುಪ್ರದೇಶದಲ್ಲಿ ಡ್ರೋನ್ ಭೀತಿ ಎದುರಾದ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಅವರ ವಿಮಾನ ವಿಳಂಬವಾಯಿತು. ಇಂತಹ ನಿರಂತರ ಅಪಾಯಗಳ ನಡುವೆಯೇ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಡ್ರೋನ್ ವಿಮಾನಕ್ಕೆ ಎಷ್ಟು ಹತ್ತಿರ ಬಂದಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ" ಎಂದು ತಿಳಿಸಿದ್ದಾರೆ.
ನಾರ್ವೆ ಹಣಕಾಸು ಸಚಿವ ಜೆನ್ಸ್ ಸ್ಟೋಲ್ಟೆನ್ಬರ್ಗ್ ಮಾತನಾಡಿ, ಓಸ್ಲೋಗೆ ಬಂದಿಳಿದ ತಕ್ಷಣ ಝೆಲೆನ್ಸ್ಕಿ ಈ ಘಟನೆಯ ಬಗ್ಗೆ ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದರು ಎಂದು ದೃಢಪಡಿಸಿದ್ದಾರೆ.
"ಅವರು ಭೇಟಿಯ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದರು. ವಿಮಾನಕ್ಕೆ ಕೆಲವು ಬೆದರಿಕೆಗಳು ಎದುರಾದ ಹಿನ್ನೆಲೆಯಲ್ಲಿ ಪ್ರಯಾಣ ವಿಳಂಬವಾಗಿತ್ತು. ಪ್ರಯಾಣದ ವೇಳೆ ಭದ್ರತಾ ಅಪಾಯಗಳಿದ್ದರೂ, ರಾಜ ಹೆರಾಲ್ಡ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರು ತೋರಿದ ಬದ್ಧತೆ ಗಮನಾರ್ಹ" ಎಂದು ಅವರು ಹೇಳಿದ್ದಾರೆ.
ಅಂತ್ಯಕ್ರಿಯೆಯ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಝೆಲೆನ್ಸ್ಕಿ, "ದಿವಂಗತ ರಾಜ ಹೆರಾಲ್ಡ್ V ಅವರಿಗೆ ಗೌರವ ಸಲ್ಲಿಸಿದ್ದೇವೆ. ಉಕ್ರೇನ್ಗೆ ನೀಡಿದ ನಿರಂತರ ಬೆಂಬಲಕ್ಕಾಗಿ ನಾರ್ವೆ ಸರ್ಕಾರ, ರಾಜಮನೆತನ ಹಾಗೂ ಅಲ್ಲಿನ ಜನತೆಗೆ ನಾವು ಎಂದಿಗೂ ಕೃತಜ್ಞರಾಗಿರುತ್ತೇವೆ" ಎಂದು ಬರೆದುಕೊಂಡಿದ್ದಾರೆ.






