ಉಕ್ರೇನ್ ಪರವಾಗಿ ಸಂಧಾನ ನಡೆಸಲು ತೆರಳುತ್ತಿಲ್ಲ: ಪುಟಿನ್ ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ

ವ್ಲಾದಿಮಿರ್ ಪುಟಿನ್ , ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಗೆ ತೆರಳಲು ಅಲಾಸ್ಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್, “ಈ ಭೇಟಿಯು ಉಕ್ರೇನ್ ಪರವಾಗಿ ಸಂಧಾನ ನಡೆಸುವ ಉದ್ದೇಶ ಹೊಂದಿಲ್ಲ. ಬದಲಿಗೆ ವ್ಲಾದಿಮಿರ್ ಪುಟಿನ್ ಅವರನ್ನು ಸಂಧಾನದ ಮೇಜಿಗೆ ಕರೆ ತರುವ ಉದ್ದೇಶ ಹೊಂದಿದೆ” ಎಂದು ಏರ್ ಫೋರ್ಸ್ ವಿಮಾನದಲ್ಲಿ ನಿರ್ಗಮಿಸುವುದಕ್ಕೂ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಈ ಭೇಟಿಯ ವೇಳೆ ಐತಿಹಾಸಿಕ ಒಪ್ಪಂದವೇರ್ಪಡುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಅಲಾಸ್ಕಾ ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, “ತಮ್ಮ ನಿರಂತರ ದಾಳಿಯು ಸಂಧಾನ ಮಾತುಕತೆಗೆ ಬಲ ತುಂಬಲಿದೆ ಎಂದು ಪುಟಿನ್ ಭಾವಿಸಿದ್ದಾರೆ. ಆದರೆ, ಅದರಿಂದ ಅವರಿಗೆ ಹಾನಿಯಾಗಿದೆ ಎಂಬುದು ನನ್ನ ಭಾವನೆಯಾಗಿದೆ. ಪುಟಿನ್ ರೊಂದಿಗಿನ ಶೃಂಗಸಭೆಯಲ್ಲಿ ನಾವು ಕೆಲವು ಫಲಿತಾಂಶಗಳನ್ನು ಪಡೆಯಲಿದ್ದೇವೆ ಎಂದು ನನಗನ್ನಿಸುತ್ತಿದೆ. ಜನರ ಜೀವ ಉಳಿಸಲು ನಾನು ಯುದ್ಧವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಒಂದು ವೇಳೆ ಈ ಒಪ್ಪಂದಕ್ಕೆ ರಶ್ಯವೇನಾದರೂ ಸಮ್ಮತಿಸದಿದ್ದರೆ, ಅದು ಗಂಭೀರ ಆರ್ಥಿಕ ಪರಿಣಾಮಗಳನ್ನು ಎದುರಿಸಲಿದೆ” ಎಂದು ಎಚ್ಚರಿಸಿದ್ದಾರೆ.
ತಮ್ಮ ಮಾತುಕತೆಯ ವೇಳೆ ಭೂಮಿಯ ವಿನಿಮಯದ ಕುರಿತು ಚರ್ಚಿಸಲಾಗುವುದು. ಆದರೆ, ಈ ಕುರಿತು ನಿರ್ಧರಿಸುವುದು ಉಕ್ರೇನ್ ಗೆ ಬಿಟ್ಟಿದ್ದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಅಮೆರಿಕ ನಿಯೋಗದಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಹಾಗೂ ಸಿಐಎ ನಿರ್ದೇಶಕ ಜಾನ್ ರ್ಯಾಟ್ ಕ್ಲಿಫ್ ಮತ್ತಿತರರಿದ್ದಾರೆ.







