ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು 10 ರೋಗಿಗಳನ್ನು ಕೊಂದ ನರ್ಸ್!

ಬರ್ಲಿನ್: ಗಂಭೀರ ಅಸ್ವಸ್ಥತೆ ಹೊಂದಿದ್ದ ರೋಗಿಗಳ ಆರೈಕೆಯಲ್ಲಿದ್ದ ನರ್ಸ್ ಒಬ್ಬ ಕೆಲಸ ಒತ್ತಡದ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ 10 ರೋಗಿಗಳನ್ನು ಕೊಂದು, ಇತರ 27 ಮಂದಿಯ ಪ್ರಾಣತೆಗೆಯಲು ಪ್ರಯತ್ನಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ನರ್ಸ್ಗೆ ಪಶ್ಚಿಮ ಜರ್ಮನಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಆದರೆ ಆರೋಪಿ ನರ್ಸ್ನ ಹೆಸರು ಬಹಿರಂಗಪಡಿಸಿಲ್ಲ. ಈತ ತನ್ನ ಆರೈಕೆಯಲ್ಲಿದ್ದ ರೋಗಿಗಳನ್ನು ನಿದ್ರಾಜನಕ ಔಷಧದ ಚುಚ್ಚುಮದ್ದು ನೀಡಿ ಸಾಯಿಸಿದ್ದಾಗಿ ಆರೋಪಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ. 2023ರ ಡಿಸೆಂಬರ್ನಿಂದ 2024ರ ಮೇ ತಿಂಗಳ ನಡುವೆ ಪಶ್ಚಿಮ ಜರ್ಮನಿಯ ವ್ಯೂರ್ಸೆಲೆನ್ ಪಟ್ಟಣದಲ್ಲಿ ಈ ರೋಗಿಗಳ ಸಾವು ಸಂಭವಿಸಿತ್ತು.
ವೃದ್ಧ ಹಾಗೂ ತೀವ್ರ ಅನಾರೋಗ್ಯಪೀಡಿತ ರೋಗಿಗಳ ಆರೈಕೆ ನರ್ಸ್ ಗೆ ಕಿರಿ ಕಿರಿ ಎನಿಸಿತ್ತು. ಆದ್ದರಿಂದ ಈತ ಜೀವ ಮತ್ತು ಸಾವಿನ ಮಾಲೀಕನಂತೆ ವರ್ತಿಸಿದ ಎಂದು ಅಭಿಯೋಜಕರು ಕೋರ್ಟ್ ನಲ್ಲಿ ವಾದ ಮಂಡಿಸಿದರು.





