ಚೀನಾ ಪರ ಗೂಢಚಾರಿಕೆ ಆರೋಪ | Nvidia CEO ಜೆನ್ಸನ್ ಹುವಾಂಗ್ಗೆ ಪದಚ್ಯುತಿಯ ಭೀತಿ

ಜೆನ್ಸನ್ ಹುವಾಂಗ್ | Photo Credit : X
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎನ್ವಿಡಿಯಾ (Nvidia) ಕಂಪೆನಿಯ ಆಡಳಿತ ಮಂಡಳಿ ಸಭೆ ಸೇರಿದ್ದು, ಸಿಇಒ ಜೆನ್ಸನ್ ಹುವಾಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ಕಂಪೆನಿಯ ಉದ್ಯೋಗಿಯೊಬ್ಬರೊಂದಿಗೆ ಹಾಗೂ ಚೀನಾ ಗೂಢಚಾರಿಕೆ ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬರೊಂದಿಗೆ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವರದಿ ತಿಳಿಸಿದೆ.
ಹುವಾಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ, ಸುಮಾರು 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಎನ್ವಿಡಿಯಾ ಕಂಪೆನಿಯ ನಾಯಕತ್ವದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗಲಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಕಂಪೆನಿಯನ್ನು ಮುನ್ನಡೆಸಿರುವ ಅವರು, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಚಿಪ್ಗಳ ಪ್ರಮುಖ ಪೂರೈಕೆದಾರನಾಗಿ ಎನ್ವಿಡಿಯಾವನ್ನು ಬೆಳೆಸಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ತಂತ್ರಜ್ಞಾನ ಪೈಪೋಟಿಯಲ್ಲೂ ಈ ಕಂಪೆನಿ ಪ್ರಮುಖ ಪಾತ್ರ ವಹಿಸುತ್ತಿದೆ.
ನವೆಂಬರ್ 8ರಂದು ಎನ್ವಿಡಿಯಾ ಆಡಳಿತ ಮಂಡಳಿ ಹುವಾಂಗ್ ಮತ್ತು ಅವರ ನಾಯಕತ್ವದ ತಂಡದ ಮೇಲೆ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕಂಪೆನಿಯ ನಿಯಮಗಳ ಪ್ರಕಾರ, ಮಂಡಳಿಯ ಬಹುಮತದ ಮತದಾನದ ಮೂಲಕ ಹುವಾಂಗ್ ಅವರನ್ನು ಯಾವುದೇ ಕಾರಣವಿದ್ದರೂ ಅಥವಾ ಕಾರಣವಿಲ್ಲದಿದ್ದರೂ ಸಿಇಒ ಹುದ್ದೆಯಿಂದ ತೆಗೆದುಹಾಕಬಹುದು.
ಹುವಾಂಗ್ ಅವರನ್ನು ವಜಾಗೊಳಿಸಲು ಕಂಪೆನಿ ಸಿದ್ಧತೆ ನಡೆಸುತ್ತಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ, ಷೇರು ಮಾರುಕಟ್ಟೆಯ ವಹಿವಾಟಿನ ನಂತರದ ಅವಧಿಯಲ್ಲಿ ಎನ್ವಿಡಿಯಾ ಷೇರುಗಳು ಶೇ.8ಕ್ಕಿಂತ ಹೆಚ್ಚು ಕುಸಿದಿವೆ. ಈ ಕುಸಿತ ಮುಂದುವರಿದರೆ ಕಂಪೆನಿಯ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 600 ಬಿಲಿಯನ್ ಡಾಲರ್ ನಷ್ಟವಾಗಲಿದೆ.
ಚೀನಾದ ಗೂಢಚಾರಿಕೆ ಆರೋಪ ಎದುರಿಸುತ್ತಿರುವ ಆಲಿಸ್ ಹುವಾಂಗ್ ಎಂಬ ಉದ್ಯಮಿಯೊಂದಿಗಿನ ಜೆನ್ಸನ್ ಹುವಾಂಗ್ ಅವರ ಸಂಬಂಧದ ಬಗ್ಗೆ ಕಂಪೆನಿ ತನಿಖೆ ಆರಂಭಿಸಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ.
63 ವರ್ಷದ ಜೆನ್ಸನ್ ಹುವಾಂಗ್ ಅವರ ಸ್ಥಾನವನ್ನು ವಹಿಸಿಕೊಳ್ಳಲು ಸದ್ಯಕ್ಕೆ ಸ್ಪಷ್ಟವಾದ ಉತ್ತರಾಧಿಕಾರಿ ಯಾರೂ ಕಾಣಿಸುತ್ತಿಲ್ಲ. ಕಂಪೆನಿಯಲ್ಲಿ ಅವರಿಗೆ ಶೇ.3.6ರಷ್ಟು ಷೇರು ಪಾಲುದಾರಿಕೆಯೂ ಇದೆ. ಅಲ್ಲದೆ, ಕಂಪೆನಿಯ ಹಲವು ಪ್ರಮುಖ ಅಧಿಕಾರಿಗಳು ನೇರವಾಗಿ ಅವರ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಹುವಾಂಗ್ ಅವರ ಬದಲಿಗೆ ಸೂಕ್ತ ವ್ಯಕ್ತಿಯನ್ನು ಗುರುತಿಸಲು ಎನ್ವಿಡಿಯಾ ಆಡಳಿತ ಮಂಡಳಿ ಹೊರಗಿನ ಸಂಸ್ಥೆಯೊಂದರ ನೆರವು ಪಡೆಯುತ್ತಿದೆ ಎಂದು ಬ್ಲೂಮ್ಬರ್ಗ್ ಬುಧವಾರ ವರದಿ ಮಾಡಿದೆ.






