Nvidia ಬೇಹುಗಾರಿಕೆ ಪ್ರಕರಣ| ಜೆನ್ಸೆನ್ ಹುವಾಂಗ್ ಜೊತೆ ಸಂಬಂಧ ಹೊಂದಿದ್ದ ಮಹಿಳೆ 2 ವರ್ಷಗಳಲ್ಲಿ 8 ಬಾರಿ ತೈವಾನ್ ಗೆ ತೆರಳಿದ್ದರು: ವರದಿ

Photo Credit : NDTV
ಹೊಸದಿಲ್ಲಿ: ಎನ್ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಂದರ್ಭ ಚೀನಾದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುತ್ತಿದ್ದಳೆನ್ನಲಾದ ಆಲಿಸ್ ಹುವಾಂಗ್ ಅಲಿಯಾಸ್ ಹುವಾಂಗ್ ಲೆ 2024 ಮತ್ತು 2025ರ ಅವಧಿಯಲ್ಲಿ ಒಟ್ಟು 8 ಬಾರಿ ತೈವಾನ್ಗೆ ಭೇಟಿ ನೀಡಿದ್ದಳು ಎಂದು ತೈವಾನ್ ಸರಕಾರದ ಸಚಿವರೋರ್ವರು ಗುರುವಾರ ತಿಳಿಸಿದ್ದಾರೆ.
ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ದೈತ್ಯ ಹೆಸರಾಗಿರುವ ತೈವಾನ್, ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿಯ ಕೇಂದ್ರಬಿಂದುವಾಗಿದೆ. ಸ್ವಯಂ ಆಡಳಿತ ಹೊಂದಿರುವ ಈ ದ್ವೀಪವನ್ನು ಚೀನಾ ತನ್ನ ಭೂಪ್ರದೇಶವೆಂದು ಹಕ್ಕು ಸಾಧಿಸುತ್ತಿದೆ.
ಅಮೆರಿಕ ಮೂಲದ ಚಿಪ್ ದಿಗ್ಗಜ ಎನ್ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್ ಸಿಂಗಾಪುರದ ಮೆಗಾಸ್ಪೀಡ್ನ ಮಾಜಿ ಕಾರ್ಯ ನಿರ್ವಾಹಕಿ ಆಲಿಸ್ ಹುವಾಂಗ್ ಜೊತೆ ತಾನು ವಿವಾಹಬಾಹಿರ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬೇಹುಗಾರಿಕೆ ಆರೋಪಗಳನ್ನು ಚೀನಾ ತಳ್ಳಿಹಾಕಿದೆ.
ಹಾಂಗ್ ಕಾಂಗ್ ಪಾಸ್ಪೋರ್ಟ್ ಬಳಸಿ ಸಾಮಾನ್ಯ ಉದ್ಯಮ ಸಂದರ್ಶಕರ ಸ್ಥಾನಮಾನದಡಿ ತೈವಾನ್ಗೆ ಪ್ರವೇಶಿಸಿದ್ದ ಆಲಿಸ್ ಹುವಾಂಗ್ ಬಗ್ಗೆ ಆ ಸಮಯದಲ್ಲಿ ಯಾವುದೇ ವಿಶೇಷ ಎಚ್ಚರಿಕೆಗಳು ಇರಲಿಲ್ಲ ಎಂದು ಮೇನ್ಲ್ಯಾಂಡ್ ಅಫೇರ್ಸ್ ಕೌನ್ಸಿಲ್ ಸಚಿವ ಚಿಯು ಚುಯಿ-ಚೆಂಗ್ ಸಂಸತ್ತಿನಲ್ಲಿ ತಿಳಿಸಿದರು.
ಅಮೆರಿಕವು ಆಲಿಸ್ ಹುವಾಂಗ್ ಚಲನವಲನಗಳ ಮೇಲೆ ನಿಗಾ ಇಡುವಂತೆ 2024ರಲ್ಲೇ ತೈವಾನ್ಗೆ ಸಲಹೆ ನೀಡಿತ್ತು ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯ ಕುರಿತು ಸಂಸತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೌನ್ಸಿಲ್ಗೆ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ ಎಂದರು. ಒಂದು ವೇಳೆ ಮಾಹಿತಿ ದೊರೆತಿದ್ದರೆ ಪ್ರವೇಶ ತಪಾಸಣೆ ಮತ್ತು ಗಡಿ ನಿಯಂತ್ರಣವನ್ನು ಹೆಚ್ಚಿಸುತ್ತಿದ್ದೆವು ಎಂದು ತಿಳಿಸಿದರು.
ದಾಖಲೆಗಳ ಪ್ರಕಾರ, ಆಲಿಸ್ ಹುವಾಂಗ್ 2024ರಲ್ಲಿ ಮೂರು ಬಾರಿ ಮತ್ತು 2025ರಲ್ಲಿ ಐದು ಬಾರಿ ತೈವಾನ್ಗೆ ಭೇಟಿ ನೀಡಿದ್ದು, ಈ ವರ್ಷ ಯಾವುದೇ ಪ್ರವೇಶ ದಾಖಲೆಗಳಿಲ್ಲ ಎಂದು ತಿಳಿಸಿದ ಚಿಯು, ‘ಆಕೆ ತೈವಾನ್ ಸಮಾಜಕ್ಕೆ ಅಪಾಯಕಾರಿ ಎಂಬ ಗುಪ್ತಚರ ಮಾಹಿತಿ ನಮ್ಮ ಬಳಿಯಿದ್ದರೆೆ ಹೆಚ್ಚಿನ ಪರಿಶೀಲನೆಗೆ ಒಳಪಡಿಸುತ್ತಿದ್ದೆವು’ ಎಂದು ಸ್ಪಷ್ಟಪಡಿಸಿದರು.
ಈ ಘಟನೆಯ ಕುರಿತು ತೈವಾನ್ನ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಸರಕಾರವು ತಿಳಿಸಿದೆ.
2025ರ ಮೇ ತಿಂಗಳಲ್ಲಿ ತೈಪೆಯಲ್ಲಿ ನಡೆದ ‘ಕಂಪ್ಯೂಟೆಕ್ಸ್’ ತಂತ್ರಜ್ಞಾನ ಪ್ರದರ್ಶನದ ಸಂದರ್ಭದಲ್ಲಿ ಜೆನ್ಸೆನ್ ಹುವಾಂಗ್ ಆಯೋಜಿಸಿದ್ದ ಔತಣಕೂಟದಲ್ಲಿ ಆಲಿಸ್ ಹುವಾಂಗ್ ಕಾಣಿಸಿಕೊಂಡಿದ್ದಳು. ಜೆನ್ಸೆನ್ ಹುವಾಂಗ್ ಮತ್ತು ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದ ಆಲಿಸ್ ಹುವಾಂಗ್ ಇತರ ಅತಿಥಿಗಳೊಂದಿಗೆ ಜೊತೆಯಾಗಿರುವುದನ್ನು ಪತ್ರಕರ್ತರು ರೆಸ್ಟೋರೆಂಟ್ ಹೊರಗೆ ನಿಂತು ಚಿತ್ರೀಕರಿಸಿದ್ದರು.






