"ಯುದ್ಧದ ಕೃತ್ಯ": ವೆನೆಜುವೆಲಾ ಅಧ್ಯಕ್ಷ ಮಡುರೊ ಸೆರೆಯನ್ನು ಖಂಡಿಸಿದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ

Photo Credit : AP \ PTI
ನ್ಯೂಯಾರ್ಕ್: ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆ ಮತ್ತು ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿದ ಅಮೆರಿಕದ ಕ್ರಮವನ್ನು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಖಂಡಿಸಿದ್ದಾರೆ. ಸಾರ್ವಭೌಮ ರಾಷ್ಟ್ರದ ಮೇಲೆ ನಡೆದ ಏಕಪಕ್ಷೀಯ ದಾಳಿಯನ್ನು "ಯುದ್ಧದ ಕೃತ್ಯ" ಎಂದು ಕರೆದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಈ ಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿರುವುದಾಗಿ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
"ಸಾರ್ವಭೌಮ ರಾಷ್ಟ್ರದ ಮೇಲೆ ಏಕಪಕ್ಷೀಯವಾಗಿ ದಾಳಿ ಮಾಡುವುದು ಯುದ್ಧದ ಕೃತ್ಯ ಮತ್ತು ಫೆಡರಲ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ" ಎಂದು ಭಾರತೀಯ ಮೂಲದ ಮೇಯರ್ ಝೊಹ್ರಾನ್ ಮಮ್ದಾನಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಆಡಳಿತ ಬದಲಾವಣೆಯ ಈ ಸ್ಪಷ್ಟ ಪ್ರಯತ್ನವು ವಿದೇಶದಲ್ಲಿರುವವರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಈ ನಗರವನ್ನು ತಮ್ಮ ಮನೆಯೆಂದು ಕರೆಯುವ ಸಾವಿರಾರು ವೆನಿಜುವೆಲಾದವರನ್ನು ಒಳಗೊಂಡಂತೆ ನ್ಯೂಯಾರ್ಕ್ ನಿವಾಸಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನನ್ನ ಜವಾಬ್ಧಾರಿ ಅವರ ಸುರಕ್ಷತೆ ಮತ್ತು ಪ್ರತಿಯೊಬ್ಬ ನ್ಯೂಯಾರ್ಕ್ ನಿವಾಸಿಯ ಸುರಕ್ಷತೆಯಾಗಿದೆ. ನನ್ನ ಆಡಳಿತವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮತ್ತು ಸಂಬಂಧಿತ ಮಾರ್ಗದರ್ಶನವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ.
ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ಶನಿವಾರ ಬೆಳಗಿನ ಜಾವ ಭಾರೀ ವಾಯುದಾಳಿಯನ್ನು ನಡೆಸಿದ್ದು, ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿದೆ. ಅಮೆರಿಕದ ನಡೆಗೆ ಇರಾನ್, ರಶ್ಯ ಸೇರಿದಂತೆ ಪ್ರಮುಖ ರಾಷ್ಟ್ರಗಳು ಖಂಡನೆಯನ್ನು ವ್ಯಕ್ತಪಡಿಸಿದೆ.







