ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಐಸೆನ್ ಕೋಟ್ ಗೆ ಬೆಂಬಲ ನೀಡಲು ಸಿದ್ಧ: ಅರಬ್ ಪಕ್ಷಗಳ 'ಆಫರ್'

ಬೆಂಜಮಿನ್ ನೆತನ್ಯಾಹು , ಗಾಡಿ ಐಸೆನ್ಕೋಟ್ | Photo Credit : AP
ಟೆಲ್ ಅವೀವ್, ನ.1: ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಗಮಿತ ಮೈತ್ರಿಕೂಟವನ್ನು ಬದಲಾಯಿಸುವ ಪ್ರಯತ್ನಗಳಲ್ಲಿ ವಿರೋಧ ಪಕ್ಷದ ನಾಯಕ ಗಾಡಿ ಐಸೆನ್ ಕೋಟ್ ಅವರಿಗೆ 'ಜಾಯಿಂಟ್ ಲಿಸ್ಟ್' (ಅರಬ್ ಪಕ್ಷಗಳ ಮೈತ್ರಿಕೂಟ) ಬೆಂಬಲ ನೀಡಲಿದೆ ಎಂದು ಹಿರಿಯ ಅರಬ್ ಸಂಸದ ಅಹ್ಮದ್ ಟಿಬಿ 'ಆಫರ್' ನೀಡಿದ್ದಾರೆ. ಆದರೆ, ಸರಕಾರಕ್ಕೆ ಸೇರ್ಪಡೆಯಾಗುವುದನ್ನು ತಳ್ಳಿಹಾಕಿರುವ ಅವರು, ಅರಬ್ ಪಕ್ಷಗಳು ಹೊಸ ಆಡಳಿತಕ್ಕೆ ಹೊರಗಿನಿಂದ ಬೆಂಬಲ ನೀಡಲಿವೆ ಎಂದು ಹೇಳಿದ್ದಾರೆ.
ಈ ಕೆಟ್ಟ ಸರಕಾರವನ್ನು ಕೆಳಗಿಳಿಸಿ, ಅದರ ಬದಲಿಗೆ ಬೇರೊಂದು ಸರಕಾರವನ್ನು ರಚಿಸಲು ಬಯಸುವ ಯಾರಿಗಾದರೂ ನಾವು ಸಹಾಯ ಮಾಡಲು ಬಯಸುತ್ತೇವೆ. ಈ ಬದಲಾವಣೆಯ ಭಾಗವಾಗಲು, ಭರವಸೆಯ ಭಾಗವಾಗಲು ನಾವು ಬಯಸುತ್ತೇವೆ. ನಾವು ಸರಕಾರದ ಭಾಗವಾಗುವುದಿಲ್ಲ. ನನಗೆ ಯಾವುದೇ ಸಚಿವ ಸ್ಥಾನ ಬೇಡ. ನಾನು ಸಂಪುಟದಲ್ಲಿ ಇರಲು ಬಯಸುವುದಿಲ್ಲ. ಆದರೆ, ಅರಬ್ ಪಕ್ಷಗಳಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಈ ಮತದಾನವು ನಿರ್ಗಮಿತ ಮೈತ್ರಿಕೂಟದ ವಿರುದ್ಧದ ಆತ್ಮರಕ್ಷಣೆಯ ಕ್ರಮವಾಗಿದೆ. ಅಭೂತಪೂರ್ವ ರೀತಿಯಲ್ಲಿ ಅರಬ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ನೆತನ್ಯಾಹು ಅವರಿಗೆ ಸರಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ನೆತನ್ಯಾಹು ವಿರೋಧಿ ಪಕ್ಷಗಳ ಅಭ್ಯರ್ಥಿಗೆ ಸರಕಾರ ರಚಿಸಲು ಅವಕಾಶ ನೀಡುವಂತೆ ರಾಷ್ಟ್ರಪತಿ ಐಸಾಕ್ ಹೆರ್ಜೋಗ್ ಅವರಿಗೆ 'ಜಾಯಿಂಟ್ ಲಿಸ್ಟ್' ಶಿಫಾರಸು ಮಾಡಲಿದೆ ಎಂದು ಅವರು ಸುಳಿವು ನೀಡಿದರು.




