ಹಾರ್ಮುಝ್ ಜಲಸಂಧಿ ಮರುತೆರೆಯುವ ಒಪ್ಪಂದದ ಸಾಧ್ಯತೆ ಕ್ಷೀಣ: ಗರಿಷ್ಠ ಮಟ್ಟದಲ್ಲೇ ಮುಂದುವರಿದ ತೈಲ ಬೆಲೆ

ಸಾಂದರ್ಭಿಕ ಚಿತ್ರ | Photo Credit : AP , PTI
ವಾಷಿಂಗ್ಟನ್, ಟೆಹ್ರಾನ್: ಅಮೆರಿಕ–ಇರಾನ್ ಯುದ್ಧ ಅಂತ್ಯಗೊಳಿಸುವ ಹಾಗೂ ಹೋರ್ಮುಝ್ ಜಲಸಂಧಿಯನ್ನು ಮರುತೆರೆಯುವ ಒಪ್ಪಂದದ ಸಾಧ್ಯತೆಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ತೈಲ ಬೆಲೆಗಳು ಒಂದು ವಾರಕ್ಕೂ ಹೆಚ್ಚು ಕಾಲದ ಗರಿಷ್ಠ ಮಟ್ಟದಲ್ಲೇ ಮುಂದುವರಿದಿವೆ.
ಆಗಸ್ಟ್ 11ರ ಮುಂಜಾನೆಯ ವರದಿಯಂತೆ, WTI ಕಚ್ಚಾ ತೈಲದ ಬೆಲೆ ಶೇ. 0.09ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 82.22 ಡಾಲರ್ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 87.80 ಡಾಲರ್ ಆಗಿದೆ.
ಇದಕ್ಕೂ ಮುನ್ನ ಎರಡೂ ಪ್ರಮುಖ ತೈಲ ಬೆಂಚ್ಮಾರ್ಕ್ಗಳು ಶೇ. 5ಕ್ಕೂ ಹೆಚ್ಚು ಏರಿಕೆ ಕಂಡು, ಜುಲೈ 31ರ ಬಳಿಕದ ಗರಿಷ್ಠ ಮಟ್ಟ ತಲುಪಿದ್ದವು.
ಶಾಂತಿ ಒಪ್ಪಂದಕ್ಕೆ ಇರಾನ್ ವಿಧಿಸಿದ್ದ ಷರತ್ತುಗಳಿಗೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧ, ದಾಳಿಗಳಲ್ಲಿ ಮೃತಪಟ್ಟವರಿಗೆ ಇರಾನ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಟ್ರಂಪ್ ಅವರ ಈ ಹೊಸ ಬೇಡಿಕೆಗಳು ಪ್ರಮುಖ ತೈಲ ಮಾರ್ಗವಾಗಿರುವ ಹೋರ್ಮುಝ್ ಜಲಸಂಧಿಯನ್ನು ಮರುತೆರೆಯುವ ಒಪ್ಪಂದವನ್ನು ಮತ್ತಷ್ಟು ಕಠಿಣಗೊಳಿಸಿವೆ.
ಇರಾನ್ ಮತ್ತು ಒಮನ್ ನಡುವೆ ಹಾರ್ಮುಝ್ ಜಲಸಂಧಿಯನ್ನು ಮರುತೆರೆಯಲು ಕಾರಣವಾಗಬಹುದಾದ ಒಪ್ಪಂದದ ಕುರಿತು ಪ್ರಗತಿಯ ನಿರೀಕ್ಷೆ ಮೂಡಿದ್ದರಿಂದ ಕಳೆದ ವಾರ ತೈಲ ಬೆಲೆಗಳು ಶೇ. 7ಕ್ಕೂ ಹೆಚ್ಚು ಕುಸಿದಿದ್ದವು.
ಆದರೆ, ಹಾರ್ಮುಝ್ ಜಲಸಂಧಿಯನ್ನು ಮರುತೆರೆಯುವ ಮೊದಲು ಅಮೆರಿಕ ತನ್ನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದರ ಜೊತೆಗೆ ಹಲವು ಷರತ್ತುಗಳನ್ನು ಪೂರೈಸಬೇಕು ಎಂದು ಇರಾನ್ ಹೇಳಿದೆ.
ಕಳೆದ ವಾರ ಪ್ರತಿಕ್ರಿಯಿಸಿದ್ದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ, ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಆಕ್ರಮಣವೇ ಹೋರ್ಮುಝ್ ಜಲಮಾರ್ಗವನ್ನು ಮುಚ್ಚಲು ಕಾರಣ ಎಂದು ಹೇಳಿದ್ದರು.
“ಅಮೆರಿಕ ತಿಳುವಳಿಕಾ ಒಪ್ಪಂದದ ಉಲ್ಲಂಘನೆಗಳನ್ನು ಕೊನೆಗೊಳಿಸುವವರೆಗೆ ಮತ್ತು ತಾನು ಮಾಡಿದ ತಪ್ಪುಗಳನ್ನು ಸರಿಪಡಿಸುವವರೆಗೆ ಮಾತುಕತೆಗಳ ಪುನರಾರಂಭ ಸಾಧ್ಯವಿಲ್ಲ” ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘ್ಚಿ ಹೇಳಿರುವುದಾಗಿ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.






