ಗಲ್ಫ್ ನಲ್ಲಿ ದೀರ್ಘ ಸಂಘರ್ಷದ ಭೀತಿ | ತೈಲ ಪೂರೈಕೆ ಅಡಚಣೆಯ ಆತಂಕ; ಕಚ್ಚಾ ತೈಲ ಬೆಲೆ ಏರಿಕೆ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ: ಅಮೆರಿಕ–ಇಸ್ರೇಲ್ ನಡೆಸುತ್ತಿರುವ ದಾಳಿಗಳು ಹಾಗೂ ಗಲ್ಫ್ ಪ್ರದೇಶದಾದ್ಯಂತ ಟೆಹ್ರಾನ್ ಕೈಗೊಂಡಿರುವ ಪ್ರತೀಕಾರದ ದಾಳಿಗಳ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮತ್ತು ಸಾರಿಗೆ ವಲಯಗಳಲ್ಲಿ ಆತಂಕ ಹೆಚ್ಚಿದ್ದು, ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಬಗ್ಗೆ ಚಿಂತೆಯು ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗುತ್ತಿವೆ.
ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 92.69 ಡಾಲರ್ (ಸುಮಾರು ₹7,700)ಕ್ಕೆ ಏರಿಕೆಯಾಗಿದೆ. ಇದು ಒಂದೇ ದಿನದಲ್ಲಿ 8.5 ಶೇಕಡಾ ಏರಿಕೆಯಾಗಿದ್ದು, ವಾರದ ಅವಧಿಯಲ್ಲಿ ಸುಮಾರು 30 ಶೇಕಡಾ ಹೆಚ್ಚಳ ಕಂಡಿದೆ.
ಗಲ್ಫ್ ಪ್ರದೇಶದಲ್ಲಿ ಸಂಘರ್ಷ ದೀರ್ಘಕಾಲ ಮುಂದುವರಿಯಬಹುದೆಂಬ ಭೀತಿಯಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯನ್ನು ಮಾರುಕಟ್ಟೆಗಳು ಅಂದಾಜಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ತೈಲ ವ್ಯಾಪಾರಿಗಳು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆ ಬಗ್ಗೆ ಇರಾನ್ ಪದೇಪದೇ ಬೆದರಿಕೆ ಹಾಕುತ್ತಿದ್ದು, ಇದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು 20 ಶೇಕಡಾ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈ ಜಲಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ಜಾಗತಿಕ ತೈಲ ಪೂರೈಕೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.







