ರಷ್ಯಾದಿಂದ ತೈಲ ಖರೀದಿ | ಭಾರತದ ಮೇಲೆ ಎರಡನೇ, ಮೂರನೇ ಹಂತದ ನಿರ್ಬಂಧ: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎರಡನೇ ಹಂತ ಅಥವಾ ಮೂರನೇ ಹಂತದ ನಿರ್ಬಂಧಗಳನ್ನು ಭಾರತದ ಮೇಲೆ ಹೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಪೋಲಿಷ್ ಅಧ್ಯಕ್ಷ ಕರೋಲ್ ನವ್ರೋಕಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯ ನಂತರ ಟ್ರಂಪ್ ಮಾತನಾಡಿದರು. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕುರಿತು ನಿರಾಶೆ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು
“ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಭಾರತದ ಮೇಲೆ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಧಿಸುವುದು ಕ್ರಮವಲ್ಲವೇ? ಈ ನಿರ್ಬಂಧಗಳಿಂದ ರಷ್ಯಾಕ್ಕೆ ನೂರಾರು ಶತಕೋಟಿ ಡಾಲರ್ ನಷ್ಟವಾಗಿದೆ. ಅದನ್ನು ನೀವು ಯಾವುದೇ ಕ್ರಮವಿಲ್ಲ ಎಂದು ಕರೆಯುತ್ತೀರಾ?” ಎಂದು ಟ್ರಂಪ್ ಪ್ರಶ್ನಿಸಿದರು.
"ಇನ್ನೂ ಎರಡನೇ ಹಂತ ಅಥವಾ ಮೂರನೇ ಹಂತದ ಕ್ರಮಗಳನ್ನು ನಾನು ಕೈಗೊಂಡಿಲ್ಲ. ಆದರೆ ನೀವು ‘ಯಾವುದೇ ಕ್ರಮವಿಲ್ಲ’ ಎಂದು ಹೇಳುತ್ತಿದ್ದರೆ, ನನಗೆ ತೋರುತ್ತದೆ ನೀವು ಹೊಸ ಕೆಲಸವನ್ನು ಹುಡುಕುವ ಸಮಯ ಬಂದಿದೆ” ಎಂದು ವರದಿಗಾರರಿಗೆ ಪ್ರತಿಕ್ರಿಯಿಸಿದರು.
“ಭಾರತವು ರಷ್ಯಾದಿಂದ ತೈಲ ಖರೀದಿಸಿದರೆ, ಭಾರತಕ್ಕೆ ದೊಡ್ಡ ಸಮಸ್ಯೆಗಳು ಎದುರಾಗಲಿವೆ", ಎಂದು ಟ್ರಂಪ್, ಎರಡು ವಾರಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ನೆನಪಿಸಿದರು.
ಆಗಸ್ಟ್ 27 ರಂದು, ಟ್ರಂಪ್ ಭಾರತಕ್ಕೆ 25% ಪರಸ್ಪರ ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದ್ದರು. ಜೊತೆಗೆ, ಭಾರತವು ರಷ್ಯಾದ ತೈಲ ಖರೀದಿಸುವುದಕ್ಕೆ ಹೆಚ್ಚುವರಿ 25% ಸುಂಕವನ್ನು ಹೇರಲಾಗಿತತ್ತು. ಇದರಿಂದ ಒಟ್ಟು ಸುಂಕದ ದರ 50% ಕ್ಕೆ ಏರಿಕೆಯಾಗಿತ್ತು.
ಯುರೋಪಿಯನ್ ಮಿತ್ರ ರಾಷ್ಟ್ರಗಳಿಂದ ಹೆಚ್ಚುತ್ತಿರುವ ಒತ್ತಡದ ನಡುವೆ, ಟ್ರಂಪ್ ಗುರುವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.







