ಹೌದಿ ಬೆದರಿಕೆ | ಭಾರತಕ್ಕೆ ಪ್ರಯಾಣಿಸುತ್ತಿದ್ದ ತೈಲಟ್ಯಾಂಕರ್ಗಳು ಸೌದಿಗೆ ವಾಪಸ್

ಸಾಂದರ್ಭಿಕ ಚಿತ್ರ | Photo Credit : AP
ರಿಯಾದ್,ಜು.22: ಭಾರತ ಹಾಗೂ ಚೀನಾಗೆ ಕಚ್ಚಾ ತೈಲವನ್ನು ಒಯ್ಯುತ್ತಿದ್ದ ಸೌದಿ ಅರೇಬಿಯದ ಮೂರು ತೈಲ ಟ್ಯಾಂಕರ್ಗಳು ಇರಾನ್ ಬೆಂಬಲಿತ ಹೌದಿ ಬಂಡುಕೋರರ ಬೆದರಿಕೆಯ ಹಿನ್ನೆಲೆಯಲ್ಲಿ ಬುಧವಾರ ಕೆಂಪು ಸಮುದ್ರದಲ್ಲಿ ಪ್ರಯಾಣ ಮುಂದುವರಿಸಲಾಗದೆ, ಹಿಂದಿರುಗಿವೆ.
ತೈಲ ಟ್ಯಾಂಕರ್ಗಳಾದ ‘ಕ್ಸಿನಂ ಲೊಂಗ್ ಯಾಂಗ್’, ‘ರೋಡೋಸ್’ ಹಾಗೂ ಅಮೆಝಾನ್ ಹಡಗುಗಳು ಸೂಯೆಝ್ ಕಾಲುವೆಯತ್ತ ಸಾಗುತ್ತಿದ್ದಾಗ, ಹುದಿ ಹೋರಾಟಗಾರರರಿಂದ ಬೆದರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಅವು ಬಂದ ದಾರಿಯಲ್ಲೇ ಹಿಂತಿರುಗಿವೆಯೆಂದು ರಾಯ್ಟರ್ಸ್ ಸುದ್ದಿಸಂಸ್ಥೆಯ ವರದಿಯೊಂದು ತಿಳಿಸಿದೆ.
ಹಾರ್ಮುಝ್ ಜಲಸಂಧಿಯ ಮುಚ್ಚುಗಡೆಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ತೀವ್ರ ಬಿಕ್ಕಟ್ಟಿಗೆ ಸಿಲುಕಿದ ಇಂಧನ ಮಾರುಕಟ್ಟೆಯನ್ನು ಉಂಟಾಗಿರುವ ಕೊರತೆಯನ್ನು ನೀಗಿಸಬಹುದಾದ ಕೆಂಪುಸಮುದ್ರ ಜಲಮಾರ್ಗಕ್ಕೂ ಅಡ್ಡಿಪಡಿಸಿದ ಎರಡನೇ ಪ್ರಕರಣ ಇದಾಗಿದೆ.
ಈ ವಾರದ ಆರಂಭದಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಆರೇಬಿಯ ವಿರುದ್ಧ ನೌಕಾಯಾನ ದಿಗ್ಬಂಧನವನ್ನು ಘೋಷಿಸಿದ್ದರು. ಈ ನಡೆಯು, ಗಲ್ಫ್ನಾಚೆಗೆ ಜಾಗತಿಕ ಇಂಧನ ಪೂರೈಕೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಹಾರ್ಮುಝ್ ಜಲಸಂಧಿ ಮುಚ್ಚುಗಡೆಯಾದ ಬಳಿಕ ಸೌದಿ ಆರೇಬಿಯವು ತೈಲ ಮಾರುಕಟ್ಟೆಗೆ ಲಕ್ಷಾಂತರ ಬ್ಯಾರಲ್ ತೈಲವನ್ನು ಸಾಗಿಸಲು ಪೈಪ್ಲೈನ್ ಅನ್ನೇ ಅವಲಂಭಿಸಿಕೊಂಡಿದೆ.






