ಇರಾನ್ ಜೊತೆ ತೈಲ ವ್ಯಾಪಾರ ಸಂಬಂಧ : ಭಾರತ ಮೂಲದ 4 ಕಂಪನಿಗಳು, 3 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಇರಾನ್ ಜೊತೆ ತೈಲ ಮತ್ತು ಪೆಟ್ರೋಕೆಮಿಕಲ್ ವ್ಯಾಪಾರದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಅಮೆರಿಕವು ಭಾರತ ಮೂಲದ ನಾಲ್ಕು ಕಂಪನಿಗಳು ಹಾಗೂ ಮೂವರು ಭಾರತೀಯ ಪ್ರಜೆಗಳ ಮೇಲೆ ನಿರ್ಬಂಧ ವಿಧಿಸಿದೆ. ‘ಆಪರೇಷನ್ ಎಕನಾಮಿಕ್ ಔಟ್ ಕಾಸ್ಟ್’ ಭಾಗವಾಗಿ ವಿಶ್ವದಾದ್ಯಂತ ಇರುವ ಇರಾನ್ ನ ಹಣಕಾಸು ಜಾಲಗಳ ವಿರುದ್ಧದ ಆರ್ಥಿಕ ದಾಳಿ ಇದಾಗಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ.
ಸುಮಾರು 119 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಇರಾನ್ ತೈಲ ಮತ್ತು ಪೆಟ್ರೋಕೆಮಿಕಲ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಬಂಧ ವಿಧಿಸಿದೆ. ಇದರೊಂದಿಗೆ ಟೆಹ್ರಾನ್ ನ ಜಾಗತಿಕ ಆದಾಯದ ಮೂಲಗಳನ್ನು ಕಡಿತಗೊಳಿಸುವ ವಾಷಿಂಗ್ಟನ್ ನ ಪ್ರಯತ್ನ ಮತ್ತಷ್ಟು ತೀವ್ರಗೊಂಡಿದೆ.
ಅಮೆರಿಕದ ಖಜಾನೆ ಇಲಾಖೆಯ ಪ್ರಕಾರ, ಭಾರತ ಮೂಲದ ಸದಾಶಿವ ಓವರ್ಸೀಸ್ ಲಿಮಿಟೆಡ್ ಕಂಪೆನಿಯು ಫೆಬ್ರವರಿ 2024ರಿಂದ ಜೂನ್ 2025ರ ನಡುವೆ ಸುಮಾರು 69 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಈ ಪೈಕಿ ಕೆಲವು ಸಾಗಣೆಗಳು ಈ ಹಿಂದೆ ವಾಷಿಂಗ್ಟನ್ನ ನಿರ್ಬಂಧಕ್ಕೆ ಒಳಗಾಗಿದ್ದ ಬೊಂಜೋರ್ ಕಮೊಡಿಟಿ ಎಫ್ಝಡ್ಇ ಕಂಪನಿಗೆ ಸಂಬಂಧಿಸಿವೆ.
ಪಿಪಿ ಸಾಫ್ಟ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಕೃತಿಸ್ ಇನ್ಫ್ರಾ ಇಂಪೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ತಲಾ ಸುಮಾರು 25 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿವೆ ಎಂದು ಅಮೆರಿಕ ತಿಳಿಸಿದೆ. ಈ ಮೂರು ಕಂಪನಿಗಳು ಒಟ್ಟಾಗಿ ಸುಮಾರು 119 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಮದು ವಹಿವಾಟು ನಡೆಸಿವೆ.
ನಾಲ್ಕನೇ ಕಂಪನಿಯಾದ ಪೋರ್ಟ್ಈಸ್ ಪಾರ್ಟ್ನರ್ಸ್ ಎಲ್ಎಲ್ ಪಿ ಕಂಪೆನಿಯು ಭಾರತ ಮೂಲದ ಕಸ್ಟಮ್ಸ್ ಬ್ರೋಕರ್ ಸಂಸ್ಥೆಯಾಗಿದ್ದು, ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಭಾರತಕ್ಕೆ ತಲುಪಿಸಲು ಹಲವು ಸಾಗಣೆಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ನಿರ್ಬಂಧಕ್ಕೆ ಒಳಗಾಗಿದೆ.
ಇದರ ಜೊತೆಗೆ, ಮೂವರು ಭಾರತೀಯ ಪ್ರಜೆಗಳ ಮೇಲೂ ಅಮೆರಿಕ ಕ್ರಮ ಕೈಗೊಂಡಿದೆ. ಪಿಪಿ ಸಾಫ್ಟ್ ಟೆಕ್ ನಿರ್ದೇಶಕ ಪ್ರಶಾಂತ್ ಗರ್ಗ್ ಹಾಗೂ ಪೋರ್ಟ್ಈಸ್ ಪಾಲುದಾರರಾದ ಇದ್ರಿಸ್ಮಿಯಾ ಅಶ್ರಫ್ಮಿಯಾ ಶೇಖ್ ಮತ್ತು ಹರೀಶ್ ರಾಮಚಂದ್ರ ರಂಗಿ ಅವರ ಮೇಲೂ ನಿರ್ಬಂಧ ವಿಧಿಸಲಾಗಿದೆ.






