ಇರಾನ್ ಮೇಲೆ ಅಮೆರಿಕ ದಾಳಿಯನ್ನು ಖಂಡಿಸಿದ ಒಮಾನ್, ಖತರ್, ಇರಾಕ್

PC : PTI
ರಾನ್: ಇರಾನ್ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯನ್ನು ಒಮಾನ್, ಖತರ್, ಇರಾಕ್ ಬಲವಾಗಿ ಖಂಡಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಪರಮಾಣು ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಲು ಒಮಾನ್ ಸಹಾಯ ಮಾಡಿತ್ತು. ಅಮೆರಿಕ ಇರಾನ್ನ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಒಮಾನ್, ಈ ಆಕ್ರಮಣಕಾರಿ ಕೃತ್ಯವನ್ನು ಖಂಡಿಸುವುದಾಗಿ ಹೇಳಿದೆ. ತಕ್ಷಣ ಉದ್ವಿಗ್ನತೆಯನ್ನು ಪರಿಹರಿಸುವಂತೆ ಆಗ್ರಹಿಸಿದೆ.
ಇರಾನ್ ಮೇಲೆ ಅಮೆರಿಕದ ದಾಳಿ ಬಗ್ಗೆ ಒಮಾನ್ ತೀವ್ರವಾದ ಕಳವಳವನ್ನು ವ್ಯಕ್ತಪಡಿಸಿದೆ. ಸಂಘರ್ಷವು ಮತ್ತಷ್ಟು ವಿಸ್ತಾರಗೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಖತರ್ ಖಂಡನೆ:
ಇರಾನ್ ಮೇಲೆ ಅಮೆರಿಕ ದಾಳಿಯು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರಂತ ಪರಿಣಾಮಗಳಿಗೆ ಕಾರಣವಾಗುತ್ತವೆ ಎಂದು ಖತರ್ ಹೇಳಿದೆ. ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಖತರ್ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.
ಇರಾಕ್ ಕಳವಳ :
ಇರಾನ್ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿರುವ ಬಗ್ಗೆ ಇರಾಕ್ ತೀವ್ರವಾದ ಕಳವಳವನ್ನು ವ್ಯಕ್ತಪಡಿಸಿದೆ. ದಾಳಿಯು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಹೇಳಿದೆ.







