Oman | ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಅಮೆರಿಕ ದಾಳಿ

Photo: x.com/PressLiberland
ವಾಷಿಂಗ್ಟನ್ : ಒಮಾನ್ ಕೊಲ್ಲಿಯಲ್ಲಿ ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಅಮೆರಿಕದ ಮಿಲಿಟರಿ ದಾಳಿ ನಡೆಸಿದೆ. ಇರಾನ್ ಬಂದರುಗಳ ಮೇಲಿನ ಅಮೇರಿಕಾ ದಿಗ್ಬಂಧನವನ್ನು ಮುರಿಯಲು ಯತ್ನಿಸಿದ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಮರ್ಥಿಸಿದೆ.
ಜುಲೈನಲ್ಲಿ 13 ದಿನಗಳ ಕಾಲ ಸಂಘರ್ಷ ತೀವ್ರಗೊಂಡ ಬಳಿಕ ದಾಳಿಗಳು ಬಹುತೇಕ ಸ್ಥಗಿತಗೊಂಡಿದ್ದವು. ಜೂನ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾಗಿದ್ದ ತಿಳುವಳಿಕಾ ಒಪ್ಪಂದ ಕುಸಿದುಬಿದ್ದ ನಂತರ, ಮಂಗಳವಾರದ ಈ ದಾಳಿ ನಡೆದಿದೆ. ಈ ಅವಧಿಯಲ್ಲಿ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತುಸು ಕಡಿಮೆಯಾಗಿತ್ತು.
ದಾಳಿಯ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಪನಾಮ ಧ್ವಜವನ್ನು ಹೊಂದಿರುವ ವೆಲಾನೋವಾ ಸರಕು ಸಾಗಣೆ ಹಡಗಿನ ಮೇಲೆ ನೌಕಾಪಡೆಯ ಹೆಲಿಕಾಪ್ಟರ್ ಎರಡು ಹೆಲ್ಫೈರ್ ಕ್ಷಿಪಣಿಗಳನ್ನು ಹಾರಿಸಿದೆ . ಈ ಹಡಗು ಒಮನ್ ಕೊಲ್ಲಿಯ ಮೂಲಕ ಸಾಗಿ, ಇರಾನ್ ಬಂದರಿನತ್ತ ಪ್ರಯಾಣಿಸುವ ಮೂಲಕ ಇರಾನ್ ಮೇಲಿನ ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸಲು ಪ್ರಯತ್ನಿಸಿತ್ತು " ಎಂದು ಹೇಳಿದೆ.
ಅಮೆರಿಕದ ಪಡೆಗಳು ಪದೇಪದೇ ನೀಡಿದ ಎಚ್ಚರಿಕೆಗಳನ್ನು ಹಡಗಿನ ಸಿಬ್ಬಂದಿ ನಿರ್ಲಕ್ಷಿಸಿದ್ದರು ಎಂದು ಆರೋಪಿಸಿರುವ CENTCOM, ದಾಳಿಯಲ್ಲಿ ಹಡಗಿನ ಎಂಜಿನ್ ಕೊಠಡಿಯನ್ನು ಗುರಿಯಾಗಿಸಲಾಗಿತ್ತು ಎಂದು ತಿಳಿಸಿದೆ. ಅಲ್ಲದೆ, ಹಡಗಿನ ಸ್ಟೀರಿಂಗ್ ಗೇರ್ ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದೆ.
ಈ ದಾಳಿಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿವೆಯೇ ಎಂಬ ಬಗ್ಗೆ CENTCOM ಸ್ಪಷ್ಟ ಮಾಹಿತಿ ನೀಡಿಲ್ಲ.
ಇರಾನ್ ಬಂದರುಗಳ ಮೇಲಿನ ದಿಗ್ಬಂಧನದ ಅವಧಿಯಲ್ಲಿ ಅಮೆರಿಕದ ಪಡೆಗಳು ಈವರೆಗೆ 55 ವಾಣಿಜ್ಯ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿವೆ. ನಿಯಮ ಪಾಲಿಸದ ಮೂರು ಹಡಗುಗಳನ್ನು ನಿಷ್ಕ್ರಿಯಗೊಳಿಸಿವೆ ಹಾಗೂ ಎರಡು ಹಡಗುಗಳನ್ನು ಪರಿಶೀಲನೆಗೆ ಒಳಪಡಿಸಿವೆ ಎಂದು CENTCOM ಮಂಗಳವಾರದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಮತ್ತೆ ಸಂಘರ್ಷ ಆರಂಭವಾದ ಹಿನ್ನೆಲೆಯಲ್ಲಿ, ಅಮೆರಿಕವು ಇರಾನ್ನ ಬಂದರುಗಳ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು ಮರುಜಾರಿಗೊಳಿಸಿದೆ. ಇದೇ ವೇಳೆ, ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಇರಾನ್ ಮತ್ತೊಮ್ಮೆ ಬಲಪಡಿಸಿದೆ.
ಜೂನ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದಿದ್ದ ತಿಳುವಳಿಕಾ ಒಪ್ಪಂದದ (MoU) ಭಾಗವಾಗಿ ಈ ಎರಡೂ ಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ದೀರ್ಘಕಾಲಿಕ ಶಾಂತಿಗೆ ದಾರಿ ಮಾಡಿಕೊಡುವಂತೆ ಹೊಸ ಮಾತುಕತೆಗಳನ್ನು ಆರಂಭಿಸುವುದು ಸೇರಿ ಇತರ ಹಲವು ವಿಚಾರಗಳು ಈ ಒಪ್ಪಂದದ ಉದ್ದೇಶವಾಗಿತ್ತು.






