‘ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ’: ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್

Photo: screengrab/x.com/ANI
ನ್ಯೂಯಾರ್ಕ್: ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವ ವ್ಯಕ್ತಿ ಹಿಂದೂವಾಗಿ ಉಳಿಯುವುದಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ಮುಸ್ಲಿಮರ ಸಮುದಾಯದ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಹಿಂದುತ್ವದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳಬೇಕಾದರೆ, ಎಲ್ಲ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇದೆ ಎಂಬುದನ್ನು ನಂಬಬೇಕು. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ’ ಎಂದರು.
1996ರಲ್ಲಿ ಹರಿಯಾಣದ ಚರ್ಖಿ ದಾದ್ರಿ ಬಳಿ ನಡೆದ ವಿಮಾನ ದುರಂತದ ಬಳಿಕ RSS ಸ್ವಯಂಸೇವಕರು ನೀಡಿದ ನೆರವನ್ನೂ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
‘ದಾದ್ರಿ ಎಂಬ ಸ್ಥಳದಲ್ಲಿ ಮೇಲೆ ಎರಡು ವಿಮಾನಗಳು ಢಿಕ್ಕಿಯಾದವು. ಎರಡೂ ಅರಬ್ ದೇಶಗಳಿಂದ ಬಂದಿದ್ದವು. ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರು. ನಮ್ಮ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪಿದರು. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯಲು, ಗುರುತಿಸಲು ಮತ್ತು ಸಂಬಂಧಿಕರು ಬಂದಾಗ ಅಂತ್ಯಕ್ರಿಯೆಯ ವಿಧಿಗಳನ್ನು ಏರ್ಪಡಿಸಲು ಸಹಾಯ ಮಾಡಿದರು. ಆಗ ನಾವು ಇವರು ಮುಸ್ಲಿಮರು ಎಂದು ಎಂದಿಗೂ ಭಾವಿಸಿರಲಿಲ್ಲ’ ಎಂದು ಭಾಗವತ್ ಹೇಳಿದರು.
1996ರ ಜುಲೈ 12ರಂದು ನಡೆದ ಈ ದುರಂತದಲ್ಲಿ ಸೌದಿ ಅರೇಬಿಯನ್ ಏರ್ಲೈನ್ಸ್ ನ ವಿಮಾನ ಮತ್ತು ಕಝಾಕಿಸ್ತಾನದ ರಾಜ್ಯ ವಿಮಾನಯಾನ ಸಂಸ್ಥೆಯ ವಿಮಾನ ಆಗಸ ಮಧ್ಯೆ ಢಿಕ್ಕಿಯಾಗಿದ್ದವು. ಘಟನೆಯಲ್ಲಿ 349 ಮಂದಿ ಮೃತಪಟ್ಟಿದ್ದರು.
‘ಭಾರತ–ಅಮೆರಿಕದ DNAಯಲ್ಲೇ ಏಕತೆಯಿದೆ’
ಶನಿವಾರ ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ‘ಯುನಿವರ್ಸಲ್ ಯೂನಿಟಿ ಸೆಲೆಬ್ರೇಷನ್’ ಕಾರ್ಯಕ್ರಮವನ್ನು ಭಾಗವತ್ ಉದ್ದೇಶಿಸಿ ಮಾತನಾಡಿದರು. ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್’ (AHEAD) ಸಂಘಟನೆ ಕಾರ್ಯಕ್ರಮ ಆಯೋಜಿಸಿತ್ತು. ವಿವಿಧ ಧರ್ಮಗಳ ಮುಖಂಡರು ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಉಪಸ್ಥಿತರಿದ್ದರು.
‘ಏಕತೆ ಮತ್ತು ವೈವಿಧ್ಯತೆ ಎರಡೂ ಭಾರತ ಮತ್ತು ಅಮೆರಿಕದ ಡಿಎನ್ಎಯಲ್ಲಿವೆ’ ಎಂದು ಭಾಗವತ್ ಹೇಳಿದರು.
ಅಮೆರಿಕದ ಸಂದರ್ಭದಲ್ಲಿ ‘ಬಹುತ್ವ’ ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಭಾರತ ಎಂದಾಗ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಮಾತು ಪ್ರಸ್ತಾಪವಾಗುತ್ತದೆ. ಈ ಏಕತೆ ಮತ್ತು ವೈವಿಧ್ಯತೆ ಎರಡೂ ಎರಡೂ ದೇಶಗಳ ಡಿಎನ್ಎಯಲ್ಲಿವೆ ಎಂದರು.
ರಾಷ್ಟ್ರಗಳು ಕೇವಲ ಭೌಗೋಳಿಕ ಅಸ್ತಿತ್ವಗಳಲ್ಲ. ವಿಶ್ವದ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಷ್ಟ್ರವೂ ಒಂದು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಭಾಗವತ್ ಅವರು ಹೇಳಿದರು.
ಪ್ರತಿಯೊಂದು ರಾಷ್ಟ್ರಕ್ಕೂ ಜಗತ್ತಿನಲ್ಲಿ ಒಂದು ನಿರ್ದಿಷ್ಟ ಪಾತ್ರವಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಎಂದು ಭಾಗವತ್ ಉಲ್ಲೇಖಿಸಿದರು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಅರಿತುಕೊಂಡು, ಅದನ್ನು ಜಗತ್ತಿಗೆ ತೋರಿಸಬೇಕಿದೆ ಎಂದರು.
‘ನಾವು ಒಂದೇ. ವೈವಿಧ್ಯತೆಯಿಂದಾಗಿ ಆ ಏಕತೆ ಅಲಂಕರಿಸಲ್ಪಟ್ಟಿದೆ’ ಎಂದು ಹೇಳಿದರು.
ವೈವಿಧ್ಯತೆಯನ್ನು ಆಚರಿಸಬೇಕು, ಗೌರವಿಸಬೇಕು ಮತ್ತು ಸ್ವೀಕರಿಸಬೇಕು. ಅದೇ ವೇಳೆ ಏಕತೆಯ ಭಾವನೆಯನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಅನೇಕ ಭಾಷೆಗಳು ಮತ್ತು ಧರ್ಮಗಳು ಜನರು ಪರಸ್ಪರ ಭಿನ್ನರು ಎಂಬ ಭಾವನೆ ಮೂಡಿಸಬಹುದು. ಆದರೆ ಮನುಷ್ಯರ ನಡುವೆ ಸಹಜ ಏಕತೆಯಿದೆ ಎಂದರು.
ಮನುಷ್ಯರು ದೈಹಿಕವಾಗಿ ಮತ್ತು ವೈಯಕ್ತಿಕವಾಗಿ ಪರಸ್ಪರ ಭಿನ್ನರಾಗಿದ್ದಾರೆ ಎಂದು ಭಾಗವತ್ ಹೇಳಿದರು. ‘ನನಗೆ ಹಸಿವಿಲ್ಲ ಎಂದ ಮಾತ್ರಕ್ಕೆ ಮತ್ತೊಬ್ಬರಿಗೂ ಹಸಿವಿಲ್ಲ ಎಂದರ್ಥವಲ್ಲ. ಇದು ನಮ್ಮ ದೈಹಿಕ ಬದುಕಿನ ವಾಸ್ತವ. ಆದರೆ ಈ ಭಿನ್ನತೆಗಳ ನಡುವೆಯೂ ಮನುಷ್ಯರಲ್ಲಿ ಸಹಜವಾದ ಏಕತೆಯಿದೆ’ ಎಂದು ಅವರು ವಿವರಿಸಿದರು.
‘ಸರಿಯಾಗಿ ಯೋಚಿಸಿದರೆ ದೇವರ ಸಮೀಪ’
ಪ್ರಾಣಿಗಳು ತಮ್ಮ ಸಹಜ ಪ್ರವೃತ್ತಿ ಮತ್ತು ದೈಹಿಕ ಅಗತ್ಯಗಳಿಗೆ ಅನುಗುಣವಾಗಿ ಬದುಕುತ್ತವೆ ಎಂದು ಭಾಗವತ್ ಹೇಳಿದರು. ‘ತಾವು ಏಕೆ ಹುಟ್ಟುತ್ತೇವೆ, ಏಕೆ ಸಾಯುತ್ತೇವೆ ಎಂಬುದರ ಬಗ್ಗೆ ಅವುಗಳಿಗೆ ಅರಿವಿಲ್ಲ. ಹುಟ್ಟಿದ ಬಳಿಕ ಬದುಕಬೇಕು; ಬದುಕಲು ಆಹಾರ ಬೇಕು. ಹಸಿವಾದಾಗ ಆಹಾರ ಹುಡುಕಿ ತಿನ್ನುತ್ತವೆ. ಅವುಗಳ ಬದುಕು ಮುಖ್ಯವಾಗಿ ಈ ಸಹಜ ಅಗತ್ಯಗಳ ಸುತ್ತಲೇ ಇರುತ್ತದೆ’ ಎಂದು ಮೋಹನ್ ಭಾಗವತ್ ಅವರು ವಿವರಿಸಿದರು.
ಇದಕ್ಕೆ ಭಿನ್ನವಾಗಿ, ಮನುಷ್ಯರು ಯೋಚಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾಗವತ್ ಹೇಳಿದರು. ಭವಿಷ್ಯದ ಅಗತ್ಯಗಳನ್ನು ಊಹಿಸಿ, ನಾಳೆ ಬೇಕಾಗಬಹುದು ಎಂಬ ಕಾರಣಕ್ಕೆ ಇಂದು ಆಹಾರವನ್ನು ಸಂಗ್ರಹಿಸಿಡುವ ಸಾಮರ್ಥ್ಯ ಮನುಷ್ಯರಿಗಿದೆ ಎಂದರು.
ಮನುಷ್ಯರಿಗೆ ಯೋಚಿಸುವ ಸಾಮರ್ಥ್ಯವಿದೆ ಎಂಬುದಷ್ಟೇ ಮುಖ್ಯವಲ್ಲ; ಅವರು ಹೇಗೆ ಯೋಚಿಸುತ್ತಾರೆ ಎಂಬುದೂ ಮುಖ್ಯ ಎಂದು ಭಾಗವತ್ ಹೇಳಿದರು. ‘ಉತ್ತಮ ಮತ್ತು ಸರಿಯಾದ ಚಿಂತನೆ ಮನುಷ್ಯನನ್ನು ದೇವರತ್ತ ಕರೆದೊಯ್ಯುತ್ತದೆ. ತಪ್ಪು ಚಿಂತನೆ ಆತನನ್ನು ಪ್ರಾಣಿಗಳ ಸಹಜ ಪ್ರವೃತ್ತಿಯ ಮಟ್ಟಕ್ಕೆ ಇಳಿಸುತ್ತದೆ’ ಎಂದು ಅವರು ವಿವರಿಸಿದರು.
‘ರಾಜಕೀಯ ಸ್ವಾರ್ಥದ ಆಟ’
‘ರಾಜಕೀಯವು ಈಗ ಸ್ವಾರ್ಥದ ಆಟವಾಗಿದೆ’ ಎಂದು ಭಾಗವತ್ ಹೇಳಿದರು. ಆದರೆ RSS ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡುತ್ತದೆ ಎಂದರು.
RSS ತನ್ನ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಇನ್ನೂ ಹಿಂದೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವದಲ್ಲಿ ರಾಜಕೀಯವು ಸಾರ್ವಜನಿಕ ಅಭಿಪ್ರಾಯದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಜನರ ಅಭಿಪ್ರಾಯ ಬಲವಾಗಿದ್ದರೆ, ಅದರ ವಿರುದ್ಧ ಹೋಗಲು ರಾಜಕಾರಣಿಗಳಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಮೊದಲು ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಭಾಗವತ್ ಅವರು ಹೇಳಿದರು.
ಮಮ್ದಾನಿ ವಿರೋಧ
ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಮೇಯರ್ ಝೊಹ್ರಾನ್ ಮಮ್ದಾನಿ, RSS ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ RSSಗೆ ಸೈದ್ಧಾಂತಿಕ ನಂಟಿದೆ. RSS ಅನ್ನು ಮಮ್ದಾನಿ ‘ಕೋಮು ಸಂಘಟನೆ’ ಎಂದು ಹೇಳಿದ್ದರು.
ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಮ್ದಾನಿ ಮಾತನಾಡಿದ್ದರು. ತಮ್ಮ ಕುಟುಂಬದಿಂದ ತಾವು ಕಲಿತ ಭಾರತವು ಎಲ್ಲರನ್ನೂ ಒಳಗೊಂಡ ಬಹುತ್ವದ ಮತ್ತು ಜಾತ್ಯತೀತ ಸಮಾಜ ಎಂಬುದಾಗಿ ಅವರು ಹೇಳಿದ್ದರು.
RSS ಮತ್ತು ಬಿಜೆಪಿಯನ್ನು ಉಲ್ಲೇಖಿಸಿದ ಅವರು, ಇಂತಹ ಚಳವಳಿ ಬೆಳೆಯುತ್ತಿರುವುದು ತಮಗೆ ತೀವ್ರ ಕಳವಳ ಉಂಟುಮಾಡಿದೆ ಎಂದು ಹೇಳಿದ್ದರು.






