ಗಾಝಾವನ್ನು ಅಂತರರಾಷ್ಟ್ರೀಯ ಪತ್ರಕರ್ತರಿಗೆ ಮುಕ್ತಗೊಳಿಸಲು 120ಕ್ಕೂ ಅಧಿಕ ಮಾಧ್ಯಮ ಸಂಸ್ಥೆಗಳ ಕರೆ

Photo credit: PTI
ಹೊಸದಿಲ್ಲಿ: ಲಾಭರಹಿತ ಪತ್ರಕರ್ತರ ಸಂಸ್ಥೆಗಳಾದ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಮತ್ತು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ನ ಮನವಿಯನ್ನು ಅನುಸರಿಸಿ ಸುದ್ದಿ ಜಾಲತಾಣ ʼದಿ ವೈರ್ʼ ಸೇರಿದಂತೆ ವಿಶ್ವಾದ್ಯಂತದ 120ಕ್ಕೂ ಅಧಿಕ ಮಾಧ್ಯಮ ಸಂಸ್ಥೆಗಳು ಗಾಝಾವನ್ನು ಅಂತರರಾಷ್ಟ್ರೀಯ ಪತ್ರಕರ್ತರಿಗೆ ಮುಕ್ತಗೊಳಿಸುವಂತೆ ಕರೆ ನೀಡಿವೆ.
ಗಾಝಾಕ್ಕೆ ತಕ್ಷಣ ಅಂತರರಾಷ್ಟ್ರೀಯ ಮಾಧ್ಯಮಗಳ ಸ್ವತಂತ್ರ ಮತ್ತು ಅನಿರ್ಬಂಧಿತ ಪ್ರವೇಶಕ್ಕಾಗಿ ಮತ್ತು ಮುತ್ತಿಗೆಯಡಿ ವರದಿಗಾರಿಕೆಯನ್ನು ಮುಂದುವರಿಸುವ ಪತ್ರಕರ್ತರಿಗೆ ಸಂಪೂರ್ಣ ರಕ್ಷಣೆಗಾಗಿ ಈ ಮಾಧ್ಯಮ ಸಂಸ್ಥೆಗಳು ಬರೆದಿರುವ ಬಹಿರಂಗ ಪತ್ರದಲ್ಲಿ ಆಗ್ರಹಿಸಲಾಗಿದೆ.
ಇಸ್ರೇಲಿ ಅಧಿಕಾರಿಗಳು 20 ತಿಂಗಳುಗಳಿಂದಲೂ ಫೆಲೆಸ್ತೀನಿ ಪ್ರದೇಶಕ್ಕೆ ಗಾಝಾದ ಹೊರಗಿನ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಆಧುನಿಕ ಯುದ್ಧದಲ್ಲಿ ಇಂತಹ ಸ್ಥಿತಿ ಈ ಹಿಂದೆಂದೂ ಕಂಡು ಬಂದಿರಲಿಲ್ಲ. ಸತ್ಯವನ್ನು ಹೇಳಬಲ್ಲ ಸ್ಥಳೀಯ ಪತ್ರಕರ್ತರು ಸ್ಥಳಾಂತರ ಮತ್ತು ಹಸಿವನ್ನು ಎದುರಿಸುತ್ತಿದ್ದಾರೆ. ಈವರೆಗೆ ಸುಮಾರು 200 ಪತ್ರಕರ್ತರನ್ನು ಇಸ್ರೇಲಿ ಸೇನೆಯು ಕೊಂದಿದೆ. ಇನ್ನೂ ಅನೇಕರು ಗಾಯಗೊಂಡಿದ್ದಾರೆ ಮತ್ತು ಪ್ರತ್ಯಕ್ಷದರ್ಶಿಗಳಾಗಿ ತಮ್ಮ ಕರ್ತವ್ಯ ನಿರ್ವಹಣೆಗಾಗಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕಿನ ಮೇಲೆ ನೇರ ದಾಳಿಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಯುದ್ಧವಲಯಗಳಿಂದ ವರದಿ ಮಾಡುವುದರಲ್ಲಿ ಅಂತರ್ಗತ ಅಪಾಯಗಳು ನಮಗೆ ತಿಳಿದಿವೆ. ಇವು ನಮ್ಮ ಅನೇಕ ಸಂಸ್ಥೆಗಳು ಬೆಳವಣಿಗೆಗಳು ಸಂಭವಿಸಿದಾಗೆಲ್ಲ ಅವುಗಳ ತನಿಖೆ ನಡೆಸಲು ಮತ್ತು ದಾಖಲಿಸಲು ಹಾಗೂ ಯುದ್ಧದ ಪರಿಣಾಮಗಳನ್ನು ತಿಳಿದುಕೊಳ್ಳಲು ದಶಕಗಳಿಂದಲೂ ಎದುರಿಸಿರುವ ಅಪಾಯಗಳಾಗಿವೆ’ ಎಂದು ಮಾಧ್ಯಮ ಸಂಸ್ಥೆಗಳು ಪತ್ರದಲ್ಲಿ ಒತ್ತಿ ಹೇಳಿವೆ.
ಈ ಪ್ರಮುಖ ಕ್ಷಣದಲ್ಲಿ ಗಾಝಾಕ್ಕೆ ಮಾನವೀಯ ನೆರವಿನ ಪುನರಾರಂಭಿಸಲು ನವೀಕೃತ ಮಿಲಿಟರಿ ಕ್ರಮ ಮತ್ತು ಪ್ರಯತ್ನಗಳೊಂದಿಗೆ ಅಂತರರಾಷ್ಟ್ರೀಯ ಪತ್ರಕರ್ತರು ಮುಕ್ತವಾಗಿ ವರದಿ ಮಾಡಲು ಸಾಧ್ಯವಾಗುವಂತೆ ಇಸ್ರೇಲ್ ಗಾಝಾದ ಗಡಿಗಳನ್ನು ತೆರೆಯುವುದು ಮತ್ತು ಪತ್ರಕರ್ತರನ್ನು ನಾಗರಿಕರಂತೆ ರಕ್ಷಿಸುವ ತನ್ನ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಅದು ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿರುವ ಮಾಧ್ಯಮ ಸಂಸ್ಥೆಗಳು,ಇದನ್ನು ಖಚಿತಪಡಿಸಲು ತಕ್ಷಣ ಮುಂದಾಗುವಂತೆ ಜಾಗತಿಕ ನಾಯಕರು,ಸರಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಆಗ್ರಹಿಸಿವೆ.







