ಆಸ್ಕರ್ ಋತು ಪ್ರಾರಂಭಕ್ಕೂ ಮುನ್ನ ಗೋಲ್ಡನ್ ಗ್ಲೋಬ್ ನಲ್ಲಿ ಮಿಂಚಿದ ʼಓಪನ್ ಹೈಮರ್ʼ

Photocreadit : forbes.com
ಹಾಲಿವುಡ್ (ಅಮೆರಿಕ): ಭಾನುವಾರ ನಡೆದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ಟೋಫರ್ ನೋಲನ್ ರ ʼಓಪನ್ ಹೈಮರ್ʼ ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಒಳಗೊಂಡಂತೆ ಒಟ್ಟು ಐದು ಪ್ರಮುಖ ಪ್ರಶಸ್ತಿಗಳಿಗೆ ಭಾಜನವಾಗಿದೆ. ಈ ಪ್ರಶಸ್ತಿಯ ಮೂಲಕ ಇನ್ನೇನು ಪ್ರಾರಂಭಗೊಳ್ಳಲಿರುವ ಆಸ್ಕರ್ ಋತುವಿನಲ್ಲಿ ಬ್ರಿಟಿಷ್ ನಿರ್ದೇಶಕರಾದ ಕ್ರಿಸ್ಟೋಫರ್ ನೋಲನ್ ತಮ್ಮ ಜೀವನಾಧಾರಿತ ಚಿತ್ರಕ್ಕೆ ಪ್ರಪ್ರಥಮ ಆಸ್ಕರ್ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು forbes.com ವರದಿ ಮಾಡಿದೆ.
ಈ ಚಿತ್ರಕ್ಕಾಗಿ ನೋಲನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭೌತವಿಜ್ಞಾನಿ ಜೆ. ರಾಬರ್ಟ್ ಒಪನ್ ಹೇಮರ್ ಜೀವನಗಾಥೆ ಕುರಿತ ಈ ಚಿತ್ರದಲ್ಲಿನ ಪೋಷಕ ಪಾತ್ರಕ್ಕಾಗಿ ರಾಬರ್ಟ್ ಡೌನಿ ಜೂನಿಯರ್ ಅತ್ಯುತ್ತಮ ಪೋಷಕ ಕಲಾವಿದ ಪ್ರಶಸ್ತಿ ಪಡೆದಿದ್ದರೆ, ಈ ಚಿತ್ರಕ್ಕೆ ಮೂಲ ಸಂಗೀತ ಒದಗಿಸಿದ್ದಕ್ಕಾಗಿ ಲುಡ್ವಿಗ್ ಗೊರಾನ್ಸನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಒಪನ್ ಹೇಮರ್’ ಚಿತ್ರ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿ ಅಮೆರಿಕಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ್ದ ಗ್ರೇಟಾ ಗೆರ್ವಿಗ್ ರ ‘ಬಾರ್ಬಿ’ ಚಿತ್ರವು ಅತ್ಯುತ್ತಮ ಸಿನಿಮೀಯ ಹಾಗೂ ಗಲ್ಲಾ ಪೆಟ್ಟಿಗೆ ಸಾಧನೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ವಿಭಾಗವು ಈ ವರ್ಷವಷ್ಟೇ ಪ್ರಾರಂಭಗೊಂಡಿದೆ.







