ಅಮೆರಿಕದ ಜನತೆಗೆ IRGC ಬಹಿರಂಗ ಪತ್ರ: ಸೇನಾ ದುಂದುವೆಚ್ಚ, ಐತಿಹಾಸಿಕ ಅಪರಾಧಗಳ ವಿರುದ್ಧ ತೀಕ್ಷ್ಣ ಪ್ರಶ್ನೆ
ಟ್ರಂಪ್ ಆಡಳಿತದ ಇಸ್ರೇಲ್ ಪರ ನೀತಿಗಳನ್ನು ತಿರಸ್ಕರಿಸಲು ಮನವಿ

Photo Credit : AP
ಟೆಹರಾನ್, ಸೆ. 28: ಇರಾನ್ ನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ (IRGC), ಅಮೆರಿಕದ ನಾಗರಿಕರನ್ನುದ್ದೇಶಿಸಿ ಮಂಗಳವಾರ ಬಹಿರಂಗ ಪತ್ರವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಅಮೆರಿಕವು ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳು ಹಾಗೂ ಅದಕ್ಕೆ ಅಪಾರ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿರುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ.
ಇರಾನ್ ಈ ಪತ್ರದ ಮೂಲಕ ಅಮೆರಿಕದ ಜನತೆಯ ಜೊತೆ ನೇರವಾಗಿ ಮಾತನಾಡುತ್ತಿದೆ ಹಾಗೂ ಇರಾನ್ ನ ನಿಲುವಿನ ಬಗ್ಗೆ ಅರಿವನ್ನು ಮೂಡಿಸಲು ಯತ್ನಿಸಿದೆ ಎಂದು IRGC ಪರವಾಗಿ ಅದರ ವಕ್ತಾರ ಹೊಸೈನ್ ಮೊಹೆಬ್ಬಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಅಮೆರಿಕದ ಸೇನೆ ಏನೆಲ್ಲಾ ಅಪರಾಧಗಳನ್ನು ಎಸಗಿದೆಯೆಂಬುದು ಅಮೆರಿಕದ ಜನತೆಗೇ ತಿಳಿದಿಲ್ಲ. ಅಲ್ಲದೆ ಅಮೆರಿಕವು ಟೆಲಿವಿಷನ್ ಹಾಗೂ ರೇಡಿಯೊಗಳ ಮೂಲಕ ದಿನದ 24 ಗಂಟೆಗಳ ಕಾಲವೂ ಏಕಪಕ್ಷೀಯವಾಗಿ ವಿವಿಧ ದೇಶಗಳ ಜೊತೆ ಸಂವಹನವನ್ನು ನಡೆಸುತ್ತಿದೆ. ಆದರೆ ಈ ವಿಷಯದಲ್ಲಿ ಇರಾನ್ ನ ಸಾಮರ್ಥ್ಯಗಳು ಸೀಮಿತವಾಗಿವೆ. ಈ ಕಾರಣಕ್ಕಾಗಿ ನಮ್ಮ (ಇರಾನ್) ಸಂದೇಶವನ್ನು ನೇರವಾಗಿ ಅಮೆರಿಕನ್ ಜನತೆಗೆ ತಲುಪಿಸಲು ಪತ್ರವನ್ನು ಸಾಧನವಾಗಿ ಬಳಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಅಮೆರಿಕ ಭೌಗೋಳಿಕವಾಗಿ ಸಾಗರಗಳು ಹಾಗೂ ಮಿಲಿಟರಿ ಮತ್ತು ಭದ್ರತಾ ಸಾಮರ್ಥ್ಯಗಳನ್ನು ಹೊಂದಿರದ ರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಿರುವುದರಿಂದ ಸುರಕ್ಷಿತವಾಗಿದೆ. ಈ ವಾಸ್ತವವನ್ನು ಪರಿಗಣನೆಗೆ ತೆಗೆದುಕೊಂಡಾಗ ಮೂಡುವ ಪ್ರಶ್ನೆಯೇನೆಂದರೆ, ಜಗತ್ತಿನಾದ್ಯಂತ 800 ಸೇನಾನೆಲೆಗಳನ್ನು ಅಮೆರಿಕವು ನಿಯೋಜಿಸಿರುವ ಉದ್ದೇಶವಾದರೂ ಏನು? ಅಮೆರಿಕದ ಮಿಲಿಟರಿ ಬಜೆಟ್ಗೆ 1.1 ಟ್ರಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡುತ್ತಿರುವುದರ ಹಿಂದಿನ ತಾರ್ಕಿಕ ಸಮರ್ಥನೆಯಾದರೂ ಏನು? ಎಂದವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
‘ಅಮೆರಿಕವು ವಿವಿಧ ಖಂಡಗಳಾದ್ಯಂತ ಹಲವಾರು ದೇಶಗಳ ವಿರುದ್ಧ ದಾಳಿಗಳನ್ನು ನಡೆಸಿದೆಯೆಂಬ ಐತಿಹಾಸಿಕ ವಾಸ್ತವಗಳನ್ನು ಅಮೆರಿಕವು ಕಡೆಗಣಿಸಬಾರದು. ಇರಾನ್ ನಲ್ಲಿ ಪ್ರಸಕ್ತ ಪರಿಸ್ಥಿತಿಯು ಜಗತ್ತಿನಾದ್ಯಂತ ಅಮೆರಿಕದ ವರ್ಚಸ್ಸಿನ ಮೇಲೆ ಪರಿಣಾಮ ಬೀರಿದೆಯೆಂದು IRGC ಭಾವಿಸಿದೆ. ಹೀಗಾಗಿ, ಅಮೆರಿಕದ ಜನತೆಗೆ ಇರಾನಿ ಜನತೆಯ ಜೊತೆ ನೇರವಾಗಿ ಸಂವಾದವನ್ನು ನಡೆಸಲು ವೇದಿಕೆಯೊಂದನ್ನು ಸೃಷ್ಟಿಸುವಂತೆ IRGC ಕರೆ ನೀಡುತ್ತದೆ’ ಎಂದು ಮೊಹೆಬ್ಬಿ ಪತ್ರದಲ್ಲಿ ತಿಳಿಸಿದ್ದಾರೆ.






