ಭಾರತದಲ್ಲಿ ‘ಚಾಟ್‌ಜಿಪಿಟಿ ಗೊ’ 1 ವರ್ಷ ಉಚಿತ : ಓಪನ್ಎಐ

ಹೊಸದಿಲ್ಲಿ, ಅ. 28: ಅಧಿಕ ಕೋರಿಕೆಯ ಮಿತಿ ಹಾಗೂ ಚಿತ್ರಗಳನ್ನು ನೀಡುವ ಸಾಮರ್ಥ್ಯ ಇರುವ ‘ಚಾಟ್‌ಜಿಪಿಟಿ ಗೊ’ವನ್ನು ಭಾರತೀಯರಿಗೆ ಉಚಿತವಾಗಿ ನೀಡಲಾಗುವುದು ಎಂದು ಓಪನ್ಎಐ ಮಂಗಳವಾರ ತಿಳಿಸಿದೆ.
ನವೆಂಬರ್ 4ರಂದು ಆರಂಭವಾಗುವ ಪ್ರಚಾರದ ಅವಧಿಯಲ್ಲಿ ನೋಂದಣಿ ಮಾಡುವ ಭಾರತೀಯರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಅದು ಹೇಳಿದೆ.
́ಚಾಟ್‌ಜಿಪಿಟಿ ಗೊ’ ಎಂಬುದು ಓಪನ್ ಎಐ ಇತ್ತೀಚೆಗೆ ಪ್ರಾರಂಭಿಸಿದ ಚಂದಾದಾರಿಕೆ ಯೋಜನೆ. ಇದು ಭಾರತದ ಬಳಕೆಗೆದಾರರಿಗೆ ಅಧಿಕ ಸಂದೇಶದ ಮಿತಿ, ಚಿತ್ರ ರಚನೆ ಹಾಗೂ ಕಡತ ಅಪ್ಲೋಡ್ ಸೌಲಭ್ಯವನ್ನು ನೀಡುತ್ತದೆ. ಭಾರತವು ಚಾಟ್‌ಜಿಪಿಟಿಯ ಎರಡನೇ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ.
ಕಂಪೆನಿ ನವೆಂಬರ್ 4ರಂದು ಬೆಂಗಳೂರಿನಲ್ಲಿ ಓಪನ್ಎಐಯ ಡೇವ್ಡೇ ಎಕ್ಸ್ಚೇಂಜ್ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಾಕ್ರಮ ಆಯೋಜನೆಯಾಗಿದೆ. ನವೆಂಬರ್ 4ರಂದು ಆರಂಭವಾಗುವ ಸೀಮಿತ ಸಮಯದ ಪ್ರಚಾರ ಅವಧಿಯ ಸಂದರ್ಭ ನೋಂದಣಿ ಮಾಡುವ ಎಲ್ಲಾ ಭಾರತೀಯ ಬಳಕೆದಾರರಿಗೆ ಚಾಟ್‌ಜಿಪಿಟಿ ಗೊ ಒಂದು ವರ್ಷ ಉಚಿತವಾಗಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಚಾಟ್‌ಜಿಪಿಟಿ ಕಳೆದ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡಗಡೆಯಾಯಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ನೂತನ ಮಾದರಿ ಅಗ್ಗ ಹಾಗೂ ಹೆಚ್ಚಿನ ಮಾಹಿತಿ ನೀಡಬಲ್ಲುದು. ಬಿಡುಗಡೆಯಾದ ಮೊದಲ ತಿಂಗಳಲ್ಲೇ ಭಾರತದಲ್ಲಿ ಪಾವತಿಸಿ ಚಂದಾದಾರಿಕೆ ಮಾಡಿಕೊಂಡವರ ಸಂಖ್ಯೆ ದ್ವಿಗುಣವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.







