ಇಸ್ರೇಲ್ಗೆ ಕಾರ್ಮಿಕರನ್ನು ಕಳುಹಿಸುವುದಕ್ಕೆ ವಿರೋಧ : ಶ್ರೀಲಂಕಾದಲ್ಲಿ ವ್ಯಾಪಕ ಪ್ರತಿಭಟನೆ

ಸಾಂದರ್ಭಿಕ ಚಿತ್ರ | Photo: NDTV
ಕೊಲಂಬೊ: ಇಸ್ರೇಲ್ ಕೋರಿಕೆಯಂತೆ ಈ ತಿಂಗಳು ಆ ದೇಶಕ್ಕೆ 10,000 ಶ್ರೀಲಂಕಾ ಕಾರ್ಮಿಕರನ್ನು ಕಳುಹಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿ ದ್ವೀಪರಾಷ್ಟ್ರದಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
ಫೆಲೆಸ್ತೀನಿಯನ್ ಪ್ರದೇಶದ ಮೇಲೆ ತನ್ನ ಮಾರಣಾಂತಿಕ ಪ್ರಹಾರ ಆರಂಭಿಸಿದ ಬಳಿಕ ಸಾವಿರಾರು ಫೆಲೆಸ್ತೀನಿಯನ್ ಕಾರ್ಮಿಕರ ಉದ್ಯೋಗ ಪರ್ಮಿಟ್ ಅನ್ನು ರದ್ದುಗೊಳಿಸಿದ್ದ ಇಸ್ರೇಲ್, ಇವರ ಬದಲಿಗೆ ದಕ್ಷಿಣ ಏಶ್ಯಾದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಇಸ್ರೇಲ್ನಲ್ಲಿ ನಿರ್ಮಾಣ ಕಾಮಗಾರಿ ಹಾಗೂ ಕೃಷಿ ಕೆಲಸಕ್ಕೆ ತಕ್ಷಣ ಶ್ರೀಲಂಕಾದ 10,000 ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವ ಒಪ್ಪಂದಕ್ಕೆ ನವೆಂಬರಿನಲ್ಲಿ ಶ್ರೀಲಂಕಾ ಸರಕಾರ ಮತ್ತು ಇಸ್ರೇಲ್ ಸಹಿ ಹಾಕಿವೆ. ಅದರಂತೆ ಡಿಸೆಂಬರ್ ಅಂತ್ಯದೊಳಗೆ 10,000 ಕಾರ್ಮಿಕರನ್ನು ಇಸ್ರೇಲ್ಗೆ ಕಳುಹಿಸುವುದಾಗಿ ಶ್ರೀಲಂಕಾ ಸರಕಾರ ಘೋಷಿಸಿದೆ.
ಅಕ್ಟೋಬರಿನಲ್ಲಿ ಸಂಘರ್ಷ ಉಲ್ಬಣಗೊಂಡಂದಿನಿಂದ ಗಾಝಾ ನಿವಾಸಿಗಳ ಪರ ರ್ಯಾಲಿ ನಡೆಸುತ್ತಿರುವ ಶ್ರೀಲಂಕಾದ ಜನತೆ ಸರಕಾರದ ನಿರ್ಧಾರದಿಂದ ಆಕ್ರೋಶಗೊಂಡಿದ್ದಾರೆ.
`ಈ ಪರಿಸ್ಥಿತಿಯ ಲಾಭ ಪಡೆಯಲು ನಾವು ಪ್ರಯತ್ನಿಸಬಾರದು. ಇಲ್ಲಿ ನೈತಿಕತೆಯ ಪ್ರಶ್ನೆ ಮತ್ತು ಸುರಕ್ಷತೆಯ ಕಾಳಜಿ ಎರಡೂ ಇದೆ. ದೇಶಕ್ಕೆ ವಿದೇಶಿ ವಿನಿಮಯವನ್ನು ಈ ರೀತಿಯಲ್ಲಿ ಸಂಗ್ರಹಿಸುವುದನ್ನು ನಾವು ವಿರೋಧಿಸುತ್ತೇವೆ' ಎಂದು `ವಲ್ರ್ಡ್ ಫೆಲೊಶಿಪ್ ಆಫ್ ಬುದ್ಧಿಸ್ಟ್'ನ ಶ್ರೀಲಂಕಾ ಘಟಕದ ಅಧ್ಯಕ್ಷ ಸುದತ್ ದೇವಪುರ ಖಂಡಿಸಿದ್ದಾರೆ.
ಕಳೆದ ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ತನ್ನ ಪ್ರಜೆಗಳನ್ನು ವಿದೇಶದಲ್ಲಿ ಉದ್ಯೋಗಕ್ಕೆ ಸೇರಿಸುವ ಮೂಲಕ ವಿದೇಶಿ ವಿನಿಮಯ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಆದರೆ ಅವರನ್ನು ಸಂಘರ್ಷ ಪೀಡಿತ ವಲಯಕ್ಕೆ ಮತ್ತು ವರ್ಣಭೇದ ನೀತಿಯನ್ನು ಪ್ರತಿಪಾದಿಸುವ ದೇಶಕ್ಕೆ ಕಳುಹಿಸುವ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಮಾನವ ಹಕ್ಕು ಪ್ರತಿಪಾದಕರು ಹೇಳಿದ್ದಾರೆ.
ಇಸ್ರೇಲ್ನ ನಡೆಗಳಿಂದ ಆಕ್ರಮಿತ ಪ್ರದೇಶಗಳಲ್ಲಿ ಫೆಲೆಸ್ತೀನ್ ಜನತೆ ಹಾಗೂ ಇತರ ಅರಬ್ ಜನರ ಮಾನವ ಹಕ್ಕುಗಳ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ತನಿಖೆ ನಡೆಸುವ ವಿಶ್ವಸಂಸ್ಥೆ ವಿಶೇಷ ಸಮಿತಿಯ ಮುಖ್ಯಸ್ಥನಾಗಿರುವ ಶ್ರೀಲಂಕಾಕ್ಕೆ ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಏನಾಗುತ್ತಿದೆ ಎಂಬುದು ತಿಳಿದಿರಲೇಬೇಕು. ಗೊತ್ತಿದ್ದೂ ಸರಕಾರ ತನ್ನ ಕಾರ್ಮಿಕರನ್ನು ಕಳುಹಿಸುವುದಾದರೆ ಅದು ಸಂಪೂರ್ಣ ಅನೈತಿಕ. ಇದನ್ನು ಸರಕಾರ ತಕ್ಷಣ ನಿಲ್ಲಿಸಬೇಕು ಎಂದು ಮಾನವ ಹಕ್ಕು ಸಂಘಟನೆ ಆಗ್ರಹಿಸಿದೆ.
ಇಸ್ರೇಲ್ಗೆ ಭಾರತದ ಕಾರ್ಮಿಕರನ್ನು ಕಳುಹಿಸುವುದನ್ನು ವಿರೋಧಿಸಿ ಕಳೆದ ತಿಂಗಳು ಭಾರತದಲ್ಲಿಯೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
10,000ಕ್ಕಿಂತಲೂ ಹೆಚ್ಚುಅರ್ಜಿ ಸ್ವೀಕಾರ: ಸರಕಾರ
ಇಸ್ರೇಲ್ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿ 10,000ಕ್ಕೂ ಅಧಿಕ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಲಂಕಾದ ಕಾರ್ಮಿಕ ಸಚಿವ ಮನೂಷ ನನಯಕ್ಕರ ಹೇಳಿದ್ದಾರೆ.
ಈ ತಿಂಗಳಾಂತ್ಯದೊಳಗೆ ಪ್ರಥಮ ತಂಡದಲ್ಲಿ 10 ಸಾವಿರ ಕಾರ್ಮಿಕರು, ಮುಂದಿನ ಹಂತದಲ್ಲಿ ನಿರ್ಮಾಣ ಕಾಮಗಾರಿ ಕ್ಷೇತ್ರಕ್ಕೆ ಮತ್ತೆ 10 ಸಾವಿರ ಕಾರ್ಮಿಕರನ್ನು ಕಳುಹಿಸಲಾಗುವುದು. ಇಸ್ರೇಲ್ನಲ್ಲಿ ಈಗಾಗಲೇ ಸುಮಾರು 9 ಸಾವಿರ ಶ್ರೀಲಂಕಾ ಕಾರ್ಮಿಕರಿದ್ದಾರೆ ಎಂದವರು ಹೇಳಿದ್ದಾರೆ.
ಸುಮಾರು 22 ದಶಲಕ್ಷ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದ್ದು ಕಳೆದ ವರ್ಷ 2.5 ದಶಲಕ್ಷ ಜನತೆ ಬಡತನದ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ.







