ಒಟ್ಟಾವ: ಅನಧಿಕೃತ ಖಾಲಿಸ್ತಾನ ಜನಮತಗಣನೆ ವೇಳೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ

PC: x.com/NuamanIshfaqM
ಒಟ್ಟಾವ: ಮೈಕೊರೆಯುವ ಚಳಿ, ಶೀತಗಾಳಿ ಮತ್ತು ದಟ್ಟ ಹಿಮದ ನಡುವೆಯೂ ಹಳದಿ ಬಣ್ಣದ ಖಾಲಿಸ್ತಾನ ಧ್ವಜವನ್ನು ಹಿಡಿದಿದ್ದ ಸಾವಿರಾರು ಮಂದಿ ಸಿಕ್ಖರು ರವಿವಾರ ನಗರದಲ್ಲಿ ನಡೆದ ಅನಧಿಕೃತ "ಖಾಲಿಸ್ತಾನ ಜನಮತಗಣನೆ"ಯಲ್ಲಿ ಪಾಲ್ಗೊಂಡರು.
ವಿಧ್ವಂಸಕ ಕೃತ್ಯಗಳಿಗಾಗಿ ಯುಎಪಿಎ ಕಾಯ್ದೆಯಲ್ಲಿ ಭಾರತದಲ್ಲಿ ನಿಷೇಧಿತವಾಗಿರುವ ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ ಜೆ) ಸಂಘಟನೆ ವತಿಯಿಂದ ಈ ಅನಧಿಕೃತ ಜನಮತಗಣನೆ ನಡೆದಿದ್ದು, ಪಂಜಾಬ್ ಪ್ರದೇಶವನ್ನು ಭಾರತದಿಂದ ಪ್ರತ್ಯೇಕಿಸಿ ಪ್ರತ್ಯೇಕ ಖಾಲಿಸ್ತಾನ ದೇಶ ಅಗತ್ಯವೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
ಆಂಟ್ರಿಯೊ, ಅಲ್ಬೆರ್ಟಾ, ಬ್ರಿಟಿಷ್ ಕೊಲಂಬಿಯಾ ಮತ್ತು ಕ್ಯೂಬೆಕ್ನಿಂದ ಆಗಮಿಸಿದ್ದ 53 ಸಾವಿರಕ್ಕೂ ಹೆಚ್ಚು ಮಂದಿ ಕೆನಡಿಯನ್ ಸಿಖ್ಖರು ಎರಡು ಕಿಲೋಮೀಟರ್ ವರೆಗೆ ಸರದಿಯಲ್ಲಿ ನಿಂತು ಮತ ಚಲಾಯಿಸಿದರು ಎಂದು ಎಸ್ಎಫ್ ಜೆ ಹೇಳಿಕೊಂಡಿದೆ. ಇದೇ ದಿನ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿಯವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಿ20 ನಾಯಕರ ಸಭೆ ವೇಳೆ ಏಕೆ ಭೇಟಿಯಾಗಬೇಕಿತ್ತು ಎಂದು ಎಸ್ಎಫ್ ಜೆ ಪ್ರಶ್ನಿಸಿದೆ.
ಭಾರತೀಯ ರಾಜಕಾರಣಿಗಳನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಹತ್ಯೆ ಮಾಡಿ ಎಂಬ ಘೋಷಣೆಯನ್ನು ಖಾಲಿಸ್ತಾನಿ ಬೆಂಬಲಿಗರು ಕೂಗುತ್ತಿದ್ದರೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಎಸ್ಎಫ್ ಜೆ ಜನರಲ್ ಕೌನ್ಸೆಲ್ ಗುರ್ಪತ್ವಂತ್ ಸಿಂಗ್ ಪನ್ನೂನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಭಾರತೀಯ ಧ್ವಜಕ್ಕೆ ಅಪಮಾನ ಮಾಡುವ ಮೂಲಕ ಜನಮತಗಣನೆ ಮುಕ್ತಾಯವಾಗಿತು ಎಂದು ತಿಳಿದು ಬಂದಿದೆ.







