ಮೆಕ್ಸಿಕೋದಲ್ಲಿ ಮೇಯರ್ ಹತ್ಯೆ ಬಳಿಕ ಭುಗಿಲೆದ್ದ ಆಕ್ರೋಶ : ‘ಜೆನ್ ಝೀ’ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ

Photo |Reuters
ಮೆಕ್ಸಿಕೋ ನಗರ : ಅಪರಾಧದ ವಿರುದ್ಧ ಹೋರಾಡುತ್ತಿದ್ದ ಉರುಪಾನ್ ಮೇಯರ್ ಕಾರ್ಲೋಸ್ ಮಾಂಜೊ ಅವರನ್ನು ನ.1ರಂದು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಳಿಕ ಮೆಕ್ಸಿಕೋದಲ್ಲಿ ಯುವ ಜನತೆ ಆಕ್ರೋಶ ಹೊರಹಾಕಿದ್ದಾರೆ. ಶನಿವಾರ “ಜೆನ್ ಝೀ” ಬ್ಯಾನರ್ ಅಡಿಯಲ್ಲಿ ಸಾವಿರಾರು ಯುವಕರು ದೇಶದಾದ್ಯಂತ ಬೀದಿಗಿಳಿದು ಹಿಂಸಾಚಾರ ಮತ್ತು ಸರಕಾರದ ವೈಫಲ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಮೆಕ್ಸಿಕೋ ನಗರದಲ್ಲಿನ ಪ್ರತಿಭಟನೆಗಳು ತೀವ್ರತೆಯನ್ನು ಪಡೆದವು. ಮುಖ ಮುಚ್ಚಿಕೊಂಡಿದ್ದ ಕೆಲವು ಪ್ರತಿಭಟನಾಕಾರರು ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ವಾಸಿಸುವ ರಾಷ್ಟ್ರೀಯ ಅರಮನೆಗೆ ಹಾಕಿದ್ದ ಬೇಲಿಗಳನ್ನು ಕೆಡವಲು ಮುಂದಾದ ಪರಿಣಾಮ ಗಲಭೆ ಸೃಷ್ಟಿಯಾಗಿದೆ. ಪೊಲೀಸರು ಅಶ್ರುವಾಯು ಬಳಸಿ ಗಲಭೆಕೋರರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 20 ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕ ಸುರಕ್ಷತಾ ಕಾರ್ಯದರ್ಶಿ ಪ್ಯಾಬ್ಲೊ ವಾಜ್ಕ್ವೆಜ್ ತಿಳಿಸಿದ್ದಾರೆ.
ಮೈಕೋವಕನ್ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಮೆರವಣಿಗೆಗಳಲ್ಲಿ ಯುವಕರು ಮೇಯರ್ ಮಾಂಜೊ ಅವರ ಹತ್ಯೆಯನ್ನು ಖಂಡಿಸಿ ಸರಕಾರದ ವಿರುದ್ಧ ಕಿಡಿಕಾರಿದರು.
“ಕಾರ್ಲೋಸ್ ಸಾಯಲಿಲ್ಲ, ಸರಕಾರವೇ ಅವನನ್ನು ಕೊಂದಿತು”, “ಔಟ್ ಮೊರೆನಾ” ಎಂಬ ಘೋಷಣೆಗಳಿಂದ ರಾಜಧಾನಿ ಬೀದಿಗಳಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ಕರೆ ನೀಡಿದ ‘ಜೆನ್ ಝೀ ಮೆಕ್ಸಿಕೋ’ ಸಂಘಟನೆ, ಪಕ್ಷಾತೀತವಾಗಿರುವುದಾಗಿ ಹೇಳಿಕೊಂಡಿದೆ. “ಹಿಂಸೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಕ್ಕೆ ಬೇಸತ್ತ ಯುವಜನರ ಧ್ವನಿ ನಾವು” ಎಂದು ತಿಳಿಸಿದೆ.







